ಚಿಕ್ಕಮಗಳೂರು: ದಲಿತ ಮುಖಂಡನ ಹತ್ಯೆ ಖಂಡಿಸಿ ವಿವಿಧ ಪಕ್ಷ, ಸಂಘಟನೆಗಳಿಂದ ಧರಣಿ

Update: 2020-09-02 13:54 GMT

ಚಿಕ್ಕಮಗಳೂರು, ಸೆ.2: ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ಯುವ ಮುಖಂಡ ಅನಿಲ ಇಂಗಳಗಿ ಕೊಲೆ ಆರೋಪಿಯನ್ನು ಗಡಿಪಾರು ಮಾಡಿ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದಿದ್ದರೂ ಜಾತಿಯ ಹೆಸರಿನಲ್ಲಿ ಇನ್ನೂ ಹತ್ಯೆ ನಡೆಯುತ್ತವೆ ಎಂದರೆ ಇದು ತಲೆ ತಗ್ಗಿಸಬೇಕಾದ ವಿಚಾರ. ಇಂತಹ ಘಟನೆಗಳು ದೇಶ ಮತ್ತು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿವೆ. ಇಂತಹ ಘಟನೆಗಳಿಗೆಲ್ಲ ಪ್ರಮುಖ ಕಾರಣ ಕೋಮುವಾದಿ ರಾಜಕೀಯವಾಗಿದೆ. ಕೋಮುವಾದ ಬಿತ್ತುವ ನಾಯಕರಿಂದಾಗಿ ಜಾತಿ ವ್ಯವಸ್ಥೆ ದೇಶದಲ್ಲಿ ಇನ್ನೂ ಬಲವಾಗಿ ಬೇರೂರುತ್ತಿದ್ದು, ಇಂತಹ ಕೋಮುವಾದಿಗಳ ವಿರುದ್ಧ ಪ್ರಗತಿಪರರೆಲ್ಲರೂ ಒಗ್ಗೂಡದಿದ್ದಲ್ಲಿ ಜಾತ್ಯತೀತ ದೇಶ ಭವಿಷ್ಯದಲ್ಲಿ ಜಾತಿವಾದಿಗಳ ದೇಶವಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದೇಶದ ಮೂಲನಿವಾಸಿಗಳು ಇಂದು ಭಯದಿಂದ ವಾಸಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಸಂಪೂರ್ಣವಾಗಿ  ಜಾರಿಯಾಗಬೇಕು. ಸಂವಿಧಾನ ಸಂಪೂರ್ಣ ಜಾರಿಗೆ ಹಾಗೂ ಜಾತಿ ಹತ್ಯೆಗಳಿಗೆ ಕಡಿವಾಣ ಹಾಕಬೇಕೆಂದರೆ ನಾವೆಲ್ಲೂರು ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು.

ಸಿಪಿಐ ಮುಖಂಡ ರೇಣುಕಾರಾಧ್ಯ ಮಾತನಾಡಿ, ಜಾತಿ ಹೆಸರಿನಲ್ಲಿ ಕೊಲೆ ಪ್ರಕರಣಗಳು ನಡೆಯುತ್ತವೆ ಎಂದರೆ ದೇಶದ ಮಾನ ಹರಾಜಾಗುತ್ತಿದೆ ಎಂದೇ ಅರ್ಥ. ದೇಶ ಇಂದು ಪ್ರಗತಿ ಸಾಧಿಸಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಜಾತಿಯ ಹೆಸರಿನಲ್ಲಿ ಅಮಾಯಕರನ್ನು ಕೊಲೆ ಮಾಡುತ್ತಿರುವುದು ಖಂಡನೀಯ. ಇಂತಹ ಘಟನೆಗಳಿಗೆ ಆಳುವ ಸರಕಾರ ಕಾನೂನು ಸುವ್ಯವಸ್ಥೆ ಮೇಲೆ ಹಿಡಿತ ಹೊಂದಿಲ್ಲದೇ ಇರುವುದೇ ಕಾರಣ ಎಂದು ಟೀಕಿಸಿದರು.

ಕೆಲ ರಾಜಕೀಯ ಪುಡಾರಿಗಳು ಮತ್ತು ಕಾರ್ಯಕರ್ತರು ಮನಸ್ಸು ಮನಸ್ಸು ಕೆಡಿಸುವ ವಿಚಾರಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ. ಜಾತಿವಾದಿಗಳು, ಕೋಮುವಾದಿಗಳು ದೇಶ ಐಕ್ಯತೆ, ಅಭಿವೃದ್ಧಿಗೆ ಅಪಾಯಕಾರಿ. ಇಂತಹ ಸಮಾಜಘಾತುಕರ ವಿರುದ್ಧ ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು. 

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ಯುವ ಮುಖಂಡ ಅನಿಲ ಇಂಗಳಗಿ ಕೊಲೆ ಅಮಾನುಷ ಘಟನೆ. ಪ್ರತಿಯೊಬ್ಬ ನಾಗರಿಕನೂ ಇಂತಹ ಘಟನೆಯನ್ನು ಖಂಡಿಸಬೇಕು. ಇಂತಹ ಘಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಹೊರತಾಗಿಲ್ಲ, 1990ರಲ್ಲಿ 9 ದಲಿತರ ಮನೆಗಳನ್ನು ಸುಟ್ಟು ಹಾಕಿದ ಸಂದರ್ಭದಲ್ಲಿ ದೊಡ್ಡ ಹೋರಾಟ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಾಗಿತ್ತು. ಸಿಂಧಗಿ ಘಟನೆ ವಿರುದ್ಧ ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದ ಘಟನೆಯನ್ನು ದಲಿತ ಮಂತ್ರಿಗಳು, ದಲಿತ ಶಾಸಕರು, ಅಧಿಕಾರಸ್ಥರು ಧ್ವನಿ ಎತ್ತದಿರುವುದು ವಿಪರ್ಯಾಸ ಎಂದ ಅವರು, ಇಂತಹ ಕೃತ್ಯ ನಡೆಸಿದ ಆರೋಪಿಯನ್ನು ಗಡಿಪಾರು ಮಾಡುವ ಮೂಲಕ ವಿಕೃತ ಮನಸ್ಸಿನ ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಧರಣಿಯಲ್ಲಿ ಜೆಡಿಎಸ್ ಮುಖಂಡ ಚಂದ್ರಪ್ಪ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ವೇಲಾಯುಧನ್, ಕೆ.ಬಿ.ಸುಧಾ, ಕಾಂಗ್ರೆಸ್‍ನ ಹಿರೇಮಗಳೂರು ರಾಮಚಂದ್ರ, ಜೆಡಿಎಸ್ ಮುಖಂಡ ಹುಣಸೆಮಕ್ಕಿ ಲಕ್ಷ್ಮಣ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪರಮೇಶ್ವರಪ್ಪ, ಡಿಎಸ್‍ಎಸ್ ಸಂಚಾಲಕ ಅಣ್ಣಯ್ಯ, ರೈತ ಸಂಘದ ಮುಖಂಡ ಗುರುಶಾಂತಪ್ಪ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಗೌಸ್ ಮೊಹಿದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಗಳ ಹತ್ಯೆಯಾದಾಗ ರೋಷವೇಶದಿಂದ ಮಾತನಾಡುವ ಸಚಿವ ಸಿ.ಟಿ.ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಸದ್ಯ ಮೌನವಾಗಿದ್ದಾರೆ. ಹತ್ಯೆಯಾಗಿರುವುದು ದಲಿತನೆಂಬ ಕಾರಣಕ್ಕೆ ಅವರು ಮೌನವಾಗಿದ್ದಾರೆ. ಈ ಘಟನೆಯಲ್ಲಿ ಓರ್ವ ಮುಸ್ಲಿಂ ಇದ್ದಿದ್ದರೆ ಸಿ.ಟಿ.ರವಿ ಹಾಗೂ ಶೋಭಾ ಸ್ಥಳಕ್ಕೆ ಭೇಟಿ ನೀಡಿ ಇಡೀ ಸಿಂಧಗಿಗೆ ಬೆಂಕಿ ಹಚ್ಚುತ್ತಿದ್ದರು. ಸಿಂದಗಿಯಲ್ಲಿ ಹತ್ಯೆಯಾದ ವ್ಯಕ್ತಿ ದಲಿತನೆಂಬ ಕಾರಣಕ್ಕೆ ಇವರಿಬ್ಬರು ದಲಿತರ ಪರ ಧ್ವನಿ ಎತ್ತುತ್ತಿಲ್ಲ, ಇವರಿಬ್ಬರು ಈಗ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಇಂತಹ ಪೈಶಾಚಿಕ ಕೃತ್ಯ ನಡೆಸುವರ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News