ಬಿಜೆಪಿ ಮುಖಂಡರು, ಬೆಂಬಲಿಗರ ವಿರುದ್ಧದ 62 ಗಂಭೀರ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರಕಾರ

Update: 2020-09-02 15:47 GMT

#ಕಾನೂನು ಇಲಾಖೆಯ ಅಭಿಪ್ರಾಯ ಕಡೆಗಣನೆ; ಸಾರ್ವಜನಿಕ ವಲಯದಲ್ಲಿ ಆಕ್ಷೇಪ

ಬೆಂಗಳೂರು, ಸೆ. 2: ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರಕಾರಿ ವ್ಯಾಜ್ಯಗಳ ಇಲಾಖೆ ಅಭಿಪ್ರಾಯವನ್ನು ಕಡೆಗಣಿಸಿ ಸಂಸದ ಪ್ರತಾಪ್ ಸಿಂಹ ಹಾಗೂ ಅರಣ್ಯ ಸಚಿವ ಆನಂದ್ ಸಿಂಗ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ ನೆಹರೂ ಓಲೆಕಾರ್ ಸಹಿತ ಇನ್ನಿತರ ಬಿಜೆಪಿ ಮುಖಂಡರ ಬೆಂಬಲಿಗರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 62 ಗಂಭೀರ ಸ್ವರೂಪದ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆದಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು.

'ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತಿದೆ. ಆದರೆ, ಯಾವುದೇ ವೈಯಕ್ತಿಕ ಪ್ರಕರಣಗಳಲ್ಲಿ ಹಿಂಪಡೆಯುವುದಿಲ್ಲ' ಎಂದು ಖುದ್ದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದರು. ಆದರೆ, ಇದೀಗ ಸರಕಾರ ಚಳವಳಿಗಾರರ ಹೆಸರಲ್ಲಿ ಬಿಜೆಪಿ ಮುಖಂಡರು ಮತ್ತು ತಮ್ಮ ಪಕ್ಷದ ಬೆಂಬಲಿಗರ ವಿರುದ್ಧ ದಾಖಲಾದ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆದುಕೊಂಡಿದೆ.

ಕಳಸಾ-ಬಂಡೂರಿ, ಮಹದಾಯಿ, ಕನ್ನಡಪರ ಹಾಗೂ ರೈತ ಹೋರಾಟಗಾರ ಮೇಲಿನ ಮೊಕದ್ದಮೆಗಳು ಸೇರಿದಂತೆ ಬಿಜೆಪಿಯ ಸಚಿವರು, ಶಾಸಕರ ಹಾಗೂ ಮುಖಂಡರ ವಿರುದ್ಧ ದಾಖಲಾಗಿದ್ದ ಗಂಭೀರ ಸ್ವರೂಪದ ಕೊಲೆಯತ್ನ, ಸಾಮರಸ್ಯ ಕದಡುವ ಗಲಭೆಯತ್ನ ಸೇರಿದಂತೆ 'ಕ್ರಿಮಿನಲ್' ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ, ಕಾನೂನು ಇಲಾಖೆ, ಅಭಿಯೋಗ, ಸರಕಾರಿ ವ್ಯಾಜ್ಯಗಳ ಇಲಾಖೆ 'ಯಾವುದೇ ಕಾರಣಕ್ಕೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತಿಲ್ಲ' ಎಂದು ಸ್ಪಷ್ಟ ಅಭಿಪ್ರಾಯ ನೀಡಿವೆ. ಆದರೆ, ಸಂಪುಟ ಉಪಸಮಿತಿಯ ಸಭೆಯು 62 ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದನ್ನು ಆಧರಿಸಿ ಸಂಪುಟ ಸಭೆಯಲ್ಲಿ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ಏನೇನು ಪ್ರಕರಣಗಳು: 2017ರ ಡಿ.3ರಂದು ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಘೋಷಿಸಲಾಗಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ರ‍್ಯಾಲಿ ನಡೆಸಲು ಯತ್ನಿಸಿದ್ದರು. ಅಲ್ಲದೆ, ಈ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಪ್ರತಾಪ್ ಸಿಂಹ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸಹಿತ ಕೊಲೆಯತ್ನ ಆರೋಪವೂ ಇತ್ತು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಜತೆಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯೋಗೇಶ್ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರ ವಿರುದ್ಧದ ಪ್ರಕರಣವನ್ನೂ ವಾಪಸ್ ಪಡೆದುಕೊಳ್ಳಲಾಗಿದೆ.

ಪ್ರತಿ ಸ್ಪರ್ಧಿಯ ಕೊಲೆಯತ್ನ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ 2019ರ ಫೆ.6ರಂದು ದಾವಣಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪ್ರಕರಣವನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಜಯ ಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಪಟ್ಟಣದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮ ಗುಂಪುಗೂಡಿ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ಎಚ್.ಪಿ.ಮಂಜಪ್ಪ ಮನೆ ಸಮೀಪ ಸೇರಿ ವಿನಾ ಕಾರಣ ಅವರೊಂದಿಗೆ ಜಗಳ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ, ಅವರಿಗೆ ಹಲ್ಲೆ ಮಾಡಿ ಕೊಲೆ ಯತ್ನದ ಉದ್ದೇಶದಿಂದ ಮಂಜಪ್ಪನ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಿ, ಜಗಳವಾಡಿ ಇಬ್ಬರಿಗೆ ಚಾಕು ಇರಿದಿದ್ದು, ಈ ಸಂಬಂಧ ದಾಖಲಾಗಿದ್ದ ಕೊಲೆಯತ್ನದ ಆರೋಪದ ಪ್ರಕರಣವನ್ನು ಹಿಂಪಡೆಯಲಾಗಿದೆ.

ತಾಲೂಕು ಕಚೇರಿ ಮುತ್ತಿಗೆ, ಸಾರ್ವಜನಿಕ ಆಸ್ತಿ ನಷ್ಟ: ಅರಣ್ಯ ಸಚಿವ ಆನಂದ್ ಸಿಂಗ್ ಅವರ ಬೆಂಬಲಿಗರು 2017ರ ಜ.27ರಂದು ಹೊಸಪೇಟೆಯ ಗೋಸಲ ಭರಸಪ್ಪ ಮತ್ತು ಇತರೆ ಸುಮಾರು 300-400 ಜನರು ಅಕ್ರಮ ಗುಂಪು ಸೇರಿ ಏಕಾಏಕಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಮುಖ್ಯದ್ವಾರದ ಗೇಟ್ ಸಹಿತ ಕಚೇರಿಯಲ್ಲಿನ ಪೀಠೋಪಕರಣ, ಹೂವಿನ ಕುಂಡ ಸೇರಿದಂತೆ 25ರಿಂದ 30 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದರು ಎನ್ನಲಾಗಿದ್ದು, ಅಲ್ಲದೆ ಕಚೇರಿಯಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಸಂಬಂಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದೆ.

ಜೀವ ಬೆದರಿಕೆ: ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು 2017ರ ಅ.1ರಂದು ಚಿನ್ನಮುಳಗುಂದ ಗ್ರಾಮದ ಹರಿಜನ ಕೇರಿಯ ಕ್ರಾಸ್ ಬಳಿ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯನ್ನು ಹಾಕಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಸಿದ್ದು, ಈ ಸಂಬಂಧ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೀರೇಕೆರೂರು ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಬೆಂಬಲಿಗರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಹಾವೇರಿ ನಗರದ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆಸಿದ ದೊಂಬಿ, ಸರಕಾರಿ ವಾಹನ ಜಖಂ, ಸಾರ್ವಜನಿಕ ಆಸ್ತಿ ನಾಶ ಸೇರಿದಂತೆ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ.

ಪೊಲೀಸ್ ಮತ್ತು ಕಾನೂನು ಇಲಾಖೆ ಅಭಿಪ್ರಾಯವನ್ನು ಕಡೆಗಣಿಸಿ ಕೋಮುಸಾಮರಸ್ಯ ಕದಡಿದ ಪ್ರಕರಣಗಳು ಸೇರಿದಂತೆ ಹಲವು ಗಂಭೀರ ಸ್ವರೂಪದ ಮೊಕದ್ದಮೆ ಹಿಂಪಡೆದ ಸರಕಾರದ ಕ್ರಮ ಸರಿಯಲ್ಲ. ಇದು ಒಂದು ರೀತಿಯಲ್ಲಿ ಶಾಂತಿ-ಸೌಹಾರ್ದತೆ ಕದಡುವ ಶಕ್ತಿಗಳಿಗೆ ಬೆಂಬಲ, ಪ್ರಚೋದನೆ ನೀಡಿದಂತಾಗುತ್ತದೆ

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News