×
Ad

ಕೊರೋನದಿಂದ ಮತ್ತಷ್ಟು ಸಂಕಷ್ಟ: ಚಿಕಿತ್ಸೆ ವಿಳಂಬದಿಂದ 'ಕುರುಡುತನದ ಆತಂಕ'

Update: 2020-09-02 22:18 IST

ಬೆಂಗಳೂರು, ಸೆ. 2: ಮಾರಕ ಕೊರೋನ ವೈರಸ್ ಸೋಂಕು ಆರ್ಥಿಕ ಕುಸಿತ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಇದೀಗ ಚಿಕಿತ್ಸೆ ವಿಳಂಬದಿಂದ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ ಶೇ.90ರಷ್ಟು ಹೆಚ್ಚಾಗಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ಕೊವಿಡ್-19ರ ಸುದೀರ್ಘ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಲ್ಕೈದು ತಿಂಗಳಿಗಿಂತ ಹೆಚ್ಚು ಕಾಲ ವೈದ್ಯರ ಭೇಟಿ ಮಾಡಲು ಸಾಧ್ಯವಾಗಿಲ್ಲ. ಕೆಲವು ರೆಟಿನಾದ ಕಾಯಿಲೆಗಳಿಗೆ ವಿಶೇಷ ಚುಚ್ಚುಮದ್ದುಗಳ ಅಗತ್ಯವಿದ್ದು ಇದನ್ನು ವೈದ್ಯರು ಮಾತ್ರ ನಿರ್ವಹಿಸಬಹುದು. ಈ ಚುಚ್ಚುಮದ್ದನ್ನು ತಪ್ಪಿಸಿಕೊಂಡಿರುವುದು ಈಗಾಗಲೇ ಇರುವ ಮಂದದೃಷ್ಟಿಯು ಹದಗೆಡಬಹುದು ಮತ್ತು ಕುರುಡುತನಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ.

ದೇಶದಲ್ಲಿ ಶೇ.35ರಷ್ಟು ವಯೋವೃದ್ಧರು ಹಲವು ರೀತಿಯ ದೃಷ್ಟಿಹೀನತೆಯೊಂದಿಗೆ ಬಳಲುತ್ತಿದ್ದಾರೆ. ಕಣ್ಣಿನ ತೊಂದರೆಗಳಾದ ಕಣ್ಣಿನ ಪೊರೆ, ಗ್ಲುಕೋಮಾ ಅಥವಾ ರೆಟಿನಾದ ಕಾಯಿಲೆಗಳಿಂದ ಬಹುಪಾಲು ಜನರು ಬಳಲುತ್ತಿದ್ದು ಸರಿಯಾದ ಸಮಯಕ್ಕೆ ರೋಗನಿರ್ಣಯ ಮಾಡಿ ಚಿಕಿತ್ಸೆ ನೀಡದಿದ್ದರೆ ಅದು ಕುರುಡುತನಕ್ಕೀಡು ಮಾಡಬಹುದು.

ಕುರುಡುತನದ ಪ್ರಮುಖ ಕಾರಣವೆಂದರೆ ವಯಸ್ಸಾದವರಲ್ಲಿ ಏಜ್-ರಿಲೇಟೆಡ್ ಮ್ಯಾಕ್ಯುಲರ್ ಡಿಜೆನರೇಶನ್(ಎಎಮ್‍ಡಿ) ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿ ಡಯಾಬಿಟಿಸ್ ಮ್ಯಾಕ್ಯುಲರ್ ಎಡಿಮಾ(ಡಿಎಂಇ). ಆರೋಗ್ಯವಂತ ವ್ಯಕ್ತಿಗೆ ಹೋಲಿಸಿದರೆ ಮಧುಮೇಹ ರೋಗಿಯು ಕುರುಡನಾಗುವ ಸಾಧ್ಯತೆಯು ಶೇ.25ಪಟ್ಟು ಹೆಚ್ಚಿರುತ್ತದೆ.

ಕೋವಿಡ್-19ರ ಲಾಕ್‍ಡೌನ್, ರೋಗಿಗಳು ವೈದ್ಯರ ಭೇಟಿಯನ್ನು ತಪ್ಪಿಸಿಕೊಳ್ಳುವಂತೆ ಮಾಡಿದೆ. ಇದು ಭಾರತದ 4.8 ಮಿಲಿಯನ್ ಅಂಧತ್ವದ ಹೊರೆಯನ್ನು ಹೆಚ್ಚಿಸಬಹುದು.

ರಾಷ್ಟ್ರೀಯ ಕುರುಡುತನ ಮತ್ತು ದೃಷ್ಟಿಹೀನ ಸಮೀಕ್ಷೆ 2019ರ ಪ್ರಕಾರ, ಭಾರತದಲ್ಲಿ ಹೆಚ್ಚಿನ ಅಂಧತ್ವ(ಶೇ.92.9) ಮತ್ತು ದೃಷ್ಟಿಹೀನತೆ(ಶೇ.96.2) ಪ್ರಕರಣಗಳು ತಪ್ಪಿಸಬಹುದಾದ ಅಥವಾ ತಡೆಗಟ್ಟಬಹುದಾದ ಕಾರಣಗಳಿಂದಾಗಿವೆ. ರೆಟಿನಾದ ಕಾಯಿಲೆಗಳಂತಹ ಕೆಲವು ಕಣ್ಣಿನ ತೊಂದರೆಗಳಿಗೆ ರೋಗಿಯ ಕಣ್ಣಿಗೆ ವೈದ್ಯಕೀಯ ತಜ್ಞರು ಮಾತ್ರ ನೀಡಬಹುದಾದ ಚುಚ್ಚುಮದ್ದಿನ ಚಿಕಿತ್ಸೆಯ ಅಗತ್ಯವಿರುತ್ತದೆ ಎಂಬುದು ತಜ್ಞರ ಅಭಿಮತವಾಗಿದೆ.

ನಿಯಮಿತ ಚಿಕಿತ್ಸೆಯ ಡೋಸೇಜ್ ತಪ್ಪಿಸುವಿಕೆಯು ದೃಷ್ಟಿ ಮತ್ತಷ್ಟು ಕ್ಷೀಣಿಸುವ ಅಪಾಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಚುಚ್ಚುಮದ್ದುಗಳು ದುಬಾರಿಯಾಗಿರುವ ಕಾರಣ ಮತ್ತು ಮಧ್ಯಮ ಹಾಗೂ ಕೆಳವರ್ಗದ ಆದಾಯವಿರುವ ಜನಸಮೂಹಕ್ಕೆ ಸೇರಿದ ರೋಗಿಗಳ ಮೇಲೆ ಹೆಚ್ಚುವರಿ ಹೊರೆಯಾಗಲು ಮುಖ್ಯ ಕಾರಣವಾಗಿರುವುದರಿಂದ ರೋಗಿಗಳು ಚಿಕಿತ್ಸೆಯೂ ವಿಳಂಬವಾಗುತ್ತಿದೆ.

`ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೃಷ್ಟಿದೋಷವುಳ್ಳವರು ವೈದ್ಯರ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಶೇ.82ರಷ್ಟು ರೋಗಿಗಳು ಲಾಕ್‍ಡೌನ್ ತೆರವುಗೊಳಿಸಿದ ನಂತರವೂ, ಕೋವಿಡ್ ಆತಂಕದಿಂದ ವೈದ್ಯರನ್ನು ಭೇಟಿ ಮಾಡುತ್ತಿಲ್ಲ. ಇದು ಆತಂಕಕಾರಿ ಪ್ರವೃತ್ತಿಯಾಗಿದ್ದು ರೋಗಿಗಳು ತಮ್ಮ ದೃಷ್ಟಿಯು ಇನ್ನಷ್ಟು ಹದಗೆಡುವುದನ್ನು ತಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಲು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು. ದೃಷ್ಟಿ ಸಮಸ್ಯೆಯಿಂದ ಹಲವರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ' ಎಂದು ಕಣ್ಣಿನ ತಜ್ಞೆ ಡಾ.ರತ್ನದೇವಿ ತಿಳಿಸಿದ್ದಾರೆ.

ಮೂರು ತಿಂಗಳಿಗಿಂತ ಹೆಚ್ಚು ವಿಳಂಬದ ಚಿಕಿತ್ಸೆಯು ಕಣ್ಣಿನ ಕಾಯಿಲೆ ಮತ್ತು ದೃಷ್ಟಿ ಹದಗೆಡುವ ಅಪಾಯವನ್ನು ಶೇ.90ರಷ್ಟು ಹೆಚ್ಚಿಸುತ್ತದೆ. ಕಾಯಿಲೆಯ ಮುಂದುವರಿದ ಹಂತವು ಶೇ.25ರಷ್ಟು ರೋಗಿಗಳಲ್ಲಿ ಕಂಡುಬರುತ್ತಿದ್ದ ಪೂರ್ವ-ಲಾಕ್‍ಡೌನ್ ಸನ್ನಿವೇಶಕ್ಕೆ ಹೋಲಿಸಿದರೆ ಸುಮಾರು ಶೇ.75ರಷ್ಟು ರೋಗಿಗಳು ರೋಗದ ಮುಂದುವರಿದ ಹಂತದಲ್ಲಿ ನಮ್ಮ ಬಳಿಗೆ ಬರುತ್ತಿದ್ದಾರೆ. ಎಎಮ್‍ಡಿ ಮತ್ತು ಡಿಎಂಇಯಂತಹ ರೆಟಿನಾದ ಕಾಯಿಲೆಗಳ ರೋಗಿಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ'

-ಡಾ.ರಾಜ ನಾರಾಯಣನ್, ವಿಟ್ರಿಯೊ ರೆಟಿನಾ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News