ಮನಸ್ಸು ಬದಲಾಯಿಸಿತೇ ಪೇಟೆ?

Update: 2020-09-02 19:30 GMT

ಉದ್ಯೋಗನಷ್ಟ, ಸುದೀರ್ಘ ರಜೆ, ಖಾಲಿಯಾದ ಹುಂಡಿಯಿಂದಾಗಿ ಅನೇಕ ಪದವೀಧರರು ಜಾಬ್‌ಕಾರ್ಡ್ ಮಾಡಿಸಿಕೊಂಡಿದ್ದಾರೆ. ನರೇಗಾ ಅಡಿಯಲ್ಲಿ ಸಾವಿರಾರು ಮಂದಿ ಈಗ ಹಾರೆ ಗುದ್ದಲಿ ಹಿಡಿದು ದುಡಿಯಲಾರಂಭಿಸಿದ್ದಾರೆ. ಇವರಲ್ಲಿ ಎಷ್ಟೋ ಜನ ಶಿಕ್ಷಣಕ್ಕೆ ಸಾಲ ಮಾಡಿದವರು. ಇನ್ನು ಕೆಲವರು ಪೇಟೆಯ ಉದ್ಯೋಗ ನಂಬಿ ಹೊಸ ಮನೆ, ಕಾರು, ಸೈಟ್‌ಗೆಂದು ಸಾಲ ತೆಗೆದರು. ಇವರ್ಯಾರಿಗೂ ಮತ್ತೆ ಅದೇ ನಗರ ಅಂತದ್ದೇ ಉದ್ಯೋಗ ನೀಡಬಹುದೆಂಬ ಯಾವ ಭರವಸೆಯೂ ಇಲ್ಲ.


ಕೊರೋನ ಸಂದರ್ಭದಲ್ಲಿ ಬಯಲುಸೀಮೆಗಿಂತ ಗಟ್ಟಿಯಾಗಿ ಪರಿಸ್ಥಿತಿಯನ್ನು ಎದುರಿಸಿ ನಿಭಾಯಿಸಿದ್ದು ಕರಾವಳಿ, ಮಲೆನಾಡು ಘಟ್ಟ ಪ್ರದೇಶ. ಇದಕ್ಕೆ ಮುಖ್ಯ ಕಾರಣ ಈ ಎರಡು ಪ್ರದೇಶವಾರು ಬೆಳೆ ವಿನ್ಯಾಸ.ಅಲ್ಪಾವಧಿ ಬೆಳೆ ಟೊಮ್ಯಾಟೋ, ಆಲೂಗೆಡ್ಡೆ, ನೀರುಳ್ಳಿ, ಶೇಂಗಾ, ಜೋಳ, ರಾಗಿ, ತರಕಾರಿ ಇತ್ಯಾದಿಗಳನ್ನು ಬೆಳೆಯುವ ಬಯಲುಸೀಮೆಯ ರೈತರು ಯಾವತ್ತೂ ಕಂಡು ಕೇಳರಿಯದ ಕೊರೋನ ಬಂದ್‌ಗೆ ತತ್ತರಿಸಿ ಹೋದರು. ಮೂರು ನಾಲ್ಕು ತಿಂಗಳ ಬೆಳೆಯನ್ನು ಕೊಯ್ಯಲೇಬೇಕು. ಕೊಯ್ದ ಮೇಲೆ ಮಾರಬೇಕು. ನಮ್ಮಲ್ಲಿ ಶೀತಲೀಕರಣ ಸಂಗ್ರಹಾಲಯಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ತತ್‌ಕ್ಷಣ ತತ್‌ಸ್ಥಳದಲ್ಲಿ ವಿಲೇವಾರಿ ಮಾಡದೆ ಹೋದರೆ ತರಕಾರಿ ಕೊಳೆತು ನಾರುವುದೇ ಹೆಚ್ಚು.

ಕಾಫಿ, ಏಲಕ್ಕಿ, ಅಡಿಕೆ, ರಬ್ಬರ್, ತೆಂಗು, ಗೋಡಂಬಿ ಹೀಗಲ್ಲ. ಸುರಕ್ಷಿತವಾಗಿ ವರ್ಷಾವಧಿ ಇಡಲು, ಬೇಕಾದಾಗ ಮಾರಲು ಸಾಧ್ಯವಾಗುತ್ತದೆ. ಕರಾವಳಿ, ಮಲೆನಾಡು, ಘಟ್ಟ ಪ್ರದೇಶದ ರೈತರು ಅಧೀರರಾಗದೆ ಉಳಿದದ್ದೇ ಈ ಸಂಗ್ರಹ, ಬಳಕೆ ವ್ಯಾಪ್ತಿಗೆ. ತಕ್ಷಣಕ್ಕೆ ಮಾರಾಟ ಮಾಡಬೇಕಾಗಿಲ್ಲದ ಯಾವುದೇ ವಸ್ತುಗಳಿಗೆ ಬೆಲೆ ಯಾರೇ ನಿಗದಿ ಮಾಡಿದರೂ ದಲ್ಲಾಳಿ-ಖರೀದಿಗಾರರು ಎಷ್ಟೇ ಪ್ರಯತ್ನಿಸಿದರೂ ಆ ವಸ್ತುಗಳ ಬಗ್ಗೆ ಬೆಳೆಗಾರನಿಗೆ ಒಂದಷ್ಟು ನಿಯಂತ್ರಣ ಇದ್ದೇ ಇರುತ್ತದೆ.

ಉದಾಹರಣೆಗೆ ಈ ಬಾರಿ ಕರಾವಳಿ-ಮಲೆನಾಡಿನ ಅಡಿಕೆಯ ಬೆಲೆ. ಕೊರೋನ ನಿಮಿತ್ತ ಅಂತರ್‌ದೇಶೀಯ ಗಡಿಗಳೆಲ್ಲಾ ಮುಚ್ಚಿ ಆಮದು ಬಂದ್ ಆದಕಾರಣ ಬೇಡಿಕೆ ಹೆಚ್ಚಾಗಿ ರೈತರು ಹದವರಿತು ಮಾರುಕಟ್ಟೆಗೆ ಮಾಲು ಬಿಟ್ಟು ಬೆಲೆ ದೀರ್ಘಾವಧಿ ಉಳಿಯುವಂತೆ ಆಯಿತು. ಮದುವೆ, ಮುಂಜಿ ಓಡಾಟ, ಚಿನ್ನ, ವಸ್ತ್ರ ಖರೀದಿ ಎಲ್ಲವೂ ನಿಂತುಹೋಗಿ ರೈತರ ದಿನವಹಿ ಖರ್ಚು ಮಿತಗೊಂಡು ರೈತರು ಸುಲಭವಾಗಿ ಖರೀದಿದಾರರ ತಂತ್ರಗಳಿಗೆ ಬಲಿಯಾಗಲಿಲ್ಲ. ಪರಿಣಾಮ ಎರಡು-ಮೂರು ದಶಕಗಳಲ್ಲೇ ಅಡಿಕೆ ಬೆಳೆಗಾರ ಗರಿಷ್ಠ ಆದಾಯ ಪಡೆದು ಸಂಕಷ್ಟ ಕಾಲವೇ ಪರಮಸುಖ ಎನ್ನುವಂತಾಯಿತು.

ಕಟ್ನವಾಡಿ-ಚಾಮರಾಜನಗರ ಜಿಲ್ಲೆಯ ಒಂದು ಪುಟ್ಟ ಗ್ರಾಮ. ಕೊರೋನ ಸಂಕಷ್ಟ ಆರಂಭವಾದ ಮೇಲೆ ಈ ಹಳ್ಳಿಗೆ ಅಂದಾಜು ನೂರೈವತ್ತು ಕುಟುಂಬಗಳು ನಗರದಿಂದ ವಾಪಸಾಗಿವೆ. ಹೊಟೇಲ್, ಗಾರ್ಮೆಂಟ್ ಫ್ಯಾಕ್ಟರಿ, ಬೇಕರಿ, ಬಟ್ಟೆ ಮಾರಾಟದ ಅಂಗಡಿ, ಆಟೊ-ಲಾರಿ ಡ್ರೈವರ್, ಟೈಲರ್ಸ್‌, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು- ಹೀಗೆ ಬಹುಬಗೆಗಳಲ್ಲಿ ದುಡಿದು ಪೇಟೆಯಲ್ಲಿ ದಶಕದಿಂದ ಬದುಕು ಕಂಡುಕೊಂಡವರು.

ಹಾಗಂತ ಇವರ್ಯಾರು ಕಟ್ನವಾಡಿಯಲ್ಲಿ ಭೂಮಿ ಇಲ್ಲದೆ ಹೋದವರಲ್ಲ. ಎಲ್ಲರಿಗೂ ಎರಡು, ಐದು, ಹತ್ತೆಕ್ರೆಯವರೆಗಿನ ಪಹಣಿಪತ್ರಗಳಿವೆ. 2002ರಲ್ಲಿ ಊರಿಗೆ ಬರಗಾಲ ಬಂತು. ಬರೀ ನೂರಡಿ, ಇನ್ನೂರಡಿ ಆಳದಲ್ಲಿ ಇದ್ದ ಸಮೃದ್ಧ ನೀರು ಸಾವಿರದಡಿಯವರೆಗೆ ಇಳಿಯಿತು. ಬಹುಪಾಲು ಕೃಷಿ ಸ್ಥಗಿತಗೊಂಡು ದುಡಿಯುವವನಿಗೂ, ದುಡಿಸುವವನಿಗೂ ಒಮ್ಮೆ ಸಮಸ್ಯೆ ಎದುರಾಯಿತು. ಭಾಗಶಃ ಇಬ್ಬರೂ ಮನೆ ಹೊಲ ಬಿಟ್ಟು ಕೆಂಪು ಬಸ್ಸು ಹತ್ತಿದರು.

ಮೈಸೂರು, ಬೆಂಗಳೂರು ನಾಲ್ಕು ತಿಂಗಳು ಹಿಂದೆ ಲಾಕ್‌ಡೌನ್ ಆದಾಗ ತಿರುಗಿ ಬಂದು ಊರು ಸೇರಿ ಅನೇಕರು ಅತ್ಯಂತ ಕಡಿಮೆ ಅವಧಿಯಲ್ಲಿ ಹಳ್ಳಿ-ತವರುನೆಲದಲ್ಲಿ ಸೆಟ್ಲ್ ಆದರು. ಕೆಲವರು ರಸ್ತೆಬದಿಯಲ್ಲಿ ತಟ್ಟಿಯಂಗಡಿ ಇಟ್ಟರು. ಕೆಲವರು ಫಾಸ್ಟ್‌ಫುಡ್ ತೆರೆದರು. ಇನ್ನೂ ಕೆಲವರು ಪುನಃ ಭೂಮಿಯನ್ನು ಹದಗೊಳಿಸಿ ಬಿತ್ತಿದರು. ತರಕಾರಿ ಬೆಳೆಸಿದರು. ಯಾರು ನಗರಕ್ಕೆ ಹೋಗಿ ಕೌಶಲ್ಯ ಬೆಳೆಸಿಕೊಂಡರೋ ಅವರಿಗೆ ಚೂರೂ ತೊಂದರೆಯಾಗಲಿಲ್ಲ. ಸ್ಕಿಲ್ ಇಲ್ಲದವರಿಗೆ ಸ್ವಲ್ಪಕಷ್ಟವಾಯಿತು.

ಕಟ್ನವಾಡಿಯೂ ಸೇರಿ ಈ ದೇಶದ ಗ್ರಾಮಗಳಿಗೆ ಈ ಅವಧಿಯಲ್ಲಿ ಆದ ಮತ್ತೊಂದು ಲಾಭ ಬಂಡವಾಳ ಹರಿದು ಬಂದದ್ದು. ನಗರ ಕೇಂದ್ರಿತರು ತಿರುಗಿ ಹಳ್ಳಿಗೆ ಬಂದು ಸ್ಥಿರವಾಗಲು ತಯಾರಿಗಾಗಿ ಒಂದಷ್ಟು ಸಂಗ್ರಹಿತ ಹುಂಡಿಯನ್ನು ಬಳಸಿದರು. ಗರಿಷ್ಠ ವೇತನ ಪಡೆಯುತ್ತಿದ್ದ ಟೆಕ್ಕಿಗಳು, ಉದ್ಯಮಿಗಳು ಲಭ್ಯ ಕೂಲಿಯಾಳುಗಳಿಗೆ ನಿಗದಿಗಿಂತ ಹೆಚ್ಚು ವೇತನ ನೀಡಿ ದುಡಿಸಿದ್ದು ಬಡ ಕಾರ್ಮಿಕರಿಗೆ ಲಾಭವೇ ಆಯಿತು.

ಗ್ರಾಮ-ಹಳ್ಳಿಗಳಲ್ಲಿ ನಿಗದಿತ ಆದಾಯಕ್ಕೆ ಬರಬಿದ್ದದ್ದು ಸಂಕಷ್ಟಕ್ಕೆ ಒಳಗಾದುದು ಚಾಲಕವರ್ಗ, ಚಿನ್ನ-ಬಟ್ಟೆಯಂಗಡಿ ಇಟ್ಟುಕೊಂಡವರು. ಜನ ರಸ್ತೆ-ಬೀದಿಗೆ ಬರದೇ ಇದ್ದಾಗ ಅವರನ್ನೇ ಅವಲಂಬಿಸಿದ ಇವರೆಲ್ಲಾ ನಿಗದಿತ ಕೂಲಿಗೂ ಕಷ್ಟಪಡಬೇಕಾಯಿತು. ಓಡಿಸುವ ಪರವಾನಿಗೆ ಇದ್ದರೂ ಹೆಚ್ಚು ಪ್ರಯಾಣಿಕರನ್ನು ಹತ್ತಿಸುವಂತಿಲ್ಲ, ಸರಕು ಸಾಗಣೆ ನಿಂತು ಹೋಗಿ ಟೆಂಪೋ-ಲಾರಿ ಚಾಲಕರು ಪರದಾಡಬೇಕಾಯಿತು.

ನಮ್ಮ ದೇಶದಲ್ಲಿ ಕೋಳಿಸಾಕಣೆ ಹೆಚ್ಚು ಅವಲಂಬಿತವಾಗಿರುವುದು ಗ್ರಾಮೀಣ ಪರಿಸರದಲ್ಲೇ. ಕೃಷಿ ಮಾಡುವ ಎಷ್ಟೋ ರೈತರು ತಮ್ಮ ಭೂಮಿಯ ಆಯಕಟ್ಟಿನ ಜಾಗದಲ್ಲಿ ಕೋಳಿಫಾರ್ಮ್ ಮಾಡಿ ಲಾಭ ಪಡೆಯುತ್ತಿದ್ದಾರೆ. ಒಪ್ಪಂದ ಕೃಷಿ ಅಥವಾ ಸ್ವಂತಕ್ಕೆ ಸಾವಿರದಿಂದ ಲಕ್ಷಾಂತರ ಕೋಳಿಯವರೆಗೆ ಸಾಕುವವರು ಪ್ರತಿ ಊರಲ್ಲೂ ಇದ್ದಾರೆ. ಗಂಡ-ಹೆಂಡತಿ, ಮನೆಮಂದಿ ತೊಡಗುವ, ಹತ್ತಾರು ಕೂಲಿಯಾಳುಗಳನ್ನು ಇಟ್ಟುಕೊಂಡು ನಿಭಾಯಿಸುವ ಘಟಕಗಳಿವೆ.

ತಿನ್ನುವ ಕೋಳಿಯಿಂದಲೇ ಕೊರೋನ ಬರುತ್ತದೆ ಎಂಬ ಗಾಳಿಸುದ್ದಿ, ಅದನ್ನೇ ಆರಂಭದಲ್ಲಿ ವೈಭವೀಕರಿಸಿದ ಮಾಧ್ಯಮಗಳಿಂದಾಗಿ ಈ ಗ್ರಾಮೀಣ ಉದ್ಯಮ ತತ್ತರಿಸಿ ಹೋಯಿತು. ಒಂದೊಂದು ಕೋಳಿ ಹದಿನೈದು ಇಪ್ಪತ್ತು ರೂಪಾಯಿಗೂ ಮಾರಾಟವಾಯಿತು! ಲಕ್ಷಾಂತರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಬೇಕಾಯಿತು. ಕೆಲವೆಡೆ ಸಾಕಣೆಯೇ ಸ್ಥಗಿತಗೊಂಡಿತು. ಸಾವಿರಾರು ಕೋಟಿ ನಷ್ಟವಾಯಿತು. ಒಂದು ಕೆ.ಜಿ. ಮಾಂಸ ಉತ್ಪಾದಿಸಲು ಕನಿಷ್ಠ 60ರಿಂದ 75 ರೂಪಾಯಿಯವರೆಗೆ ಖರ್ಚು ಬರುತ್ತದೆ. ಅಂತಹ ಕೋಳಿಮಾಂಸ-ಉದ್ಯಮ ಬರೀ ಗಾಳಿಸುದ್ದಿಗಷ್ಟೇ ಅಲ್ಲ ಮದುವೆ ಮುಂಜಿ ಹಬ್ಬ ಹರಿದಿನಗಳು ನಿಂತು ಬೇಡಿಕೆ ಕುಸಿದು ನಷ್ಟಕ್ಕೆ ಒಳಗಾದುವು.

ಹಳ್ಳಿಗರು ನಗರ ಸೇರಿದಾಗ ಅವರೊಳಗೆ ಸಹಜವಾಗಿ ಬಡತನ, ಮೃದುತ್ವ, ಸಹನೆ, ತಾಳ್ಮೆ ಎಷ್ಟೇ ಇದ್ದರೂ ನಗರ ಅವರನ್ನು ಬಹಳ ಬೇಗ ಆವರಿಸಿ ಬದಲಾಯಿಸಿ ಒಂದಷ್ಟು ಮೋಸದಾಟ, ಕೃತಕತೆ, ಯಂತ್ರಗಳನ್ನು ತುಂಬಿಸಿಯೇ ಬಿಡುತ್ತದೆ. ಭಾಷೆ, ಹಾವಭಾವ, ನಾಜೂಕುತನ ಮೈತುಂಬಿ ಅವರು ಬೇರೆಯೇ ಆಗುತ್ತಾರೆ. ಕರಾವಳಿಯಿಂದ, ಉತ್ತರ ಕರ್ನಾಟಕದಿಂದ ಮುಂಬೈಗೆ ಹೋದವರಲ್ಲಿ ಇಂತಹ ಬದಲಾದ ನಡವಳಿಕೆಯನ್ನು ಬಹಳ ಬೇಗ ಗುರುತಿಸಲು ಸಾಧ್ಯವಾಗುತ್ತದೆ. ಮನಸ್ಸು ಬದಲಾಗಿ ಅದಕ್ಕೆ ಸರಿಹೊಂದುವಂತೆ ದೇಹದ ಭಾಷೆಯೂ ಬದಲಾಗುತ್ತದೆ. ಮುಂಬೈಗೆ ಇಂತಹ ಶಕ್ತಿ ಸ್ವಲ್ಪ ಜಾಸ್ತಿಯೇ ಇದೆ. ಹಾಗಂತ ಬೇರೆ ಮಹಾನಗರಗಳಿಗೂ ಸಹಜ ಚರ್ಯೆ ಬದಲಾಯಿಸುವ ಶಕ್ತಿ ಇದ್ದೇ ಇದೆ. ಮಾತು, ದೇಹಭಾಷೆಯ

ಬದಲಾವಣೆಯನ್ನೇ ವಸ್ತುವನ್ನಾಗಿಸಿಕೊಂಡು ತುಳುವಿನಲ್ಲಿ ಒಂದಷ್ಟು ನಾಟಕಗಳು ಬಂದದ್ದೂ ಇದೆ. ಮೊದಲು ಇವರೆಲ್ಲಾ ಇದೇ ಗ್ರಾಮಗಳಲ್ಲಿ ಹುಟ್ಟಿ ಬೆಳೆದು ಬಾಳಿದವರಾದರೂ ಪೇಟೆಯಲ್ಲಿ ಬದಲಾದ ಮನಸ್ಥಿತಿಯಿಂದಾಗಿ ತಿರುಗಿ ಬಂದಾಗ ಒಂದಷ್ಟು ಕಾಲ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಶ್ರಮದ ದುಡಿಮೆಗೆ ಮೈ ಬಗ್ಗುವುದು ಕಷ್ಟವೇ.

ಆದರೆ ಕೊರೋನ ಸಂಕಷ್ಟ-ರಜೆ ದೀರ್ಘವಾದಾಗ ನಗರ ವಿಮುಖರು ತಮ್ಮ ಹಮ್ಮು ಬಿಮ್ಮುಗಳನ್ನು ಬಿಡಬೇಕಾಗಿದೆ. ಪದವಿಯ ಹಮ್ಮು, ನಗರದ ವೇತನದ ಹಮ್ಮು, ಮೊದಲಿದ್ದ ಪದನಾಮದ ಹಮ್ಮು, ಮಕ್ಕಳು ಮುಂಚೆ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದರು ಎಂಬ ಹಮ್ಮು, ಮಡದಿ ಯಾವುದೋ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಿದ್ದಳು ಎಂಬ ಹಮ್ಮುಗಳನ್ನು ಕಳಚಬೇಕಾಗಿದೆ. ಉದ್ಯೋಗನಷ್ಟ, ಸುದೀರ್ಘ ರಜೆ, ಖಾಲಿಯಾದ ಹುಂಡಿಯಿಂದಾಗಿ ಅನೇಕ ಪದವೀಧರರು ಜಾಬ್‌ಕಾರ್ಡ್ ಮಾಡಿಸಿಕೊಂಡಿದ್ದಾರೆ. ನರೇಗಾ ಅಡಿಯಲ್ಲಿ ಸಾವಿರಾರು ಮಂದಿ ಈಗ ಹಾರೆ ಗುದ್ದಲಿ ಹಿಡಿದು ದುಡಿಯಲಾರಂಭಿಸಿದ್ದಾರೆ. ಇವರಲ್ಲಿ ಎಷ್ಟೋ ಜನ ಶಿಕ್ಷಣಕ್ಕೆ ಸಾಲ ಮಾಡಿದವರು. ಇನ್ನು ಕೆಲವರು ಪೇಟೆಯ ಉದ್ಯೋಗ ನಂಬಿ ಹೊಸ ಮನೆ, ಕಾರು, ಸೈಟ್‌ಗೆಂದು ಸಾಲ ತೆಗೆದರು. ಇವರ್ಯಾರಿಗೂ ಮತ್ತೆ ಅದೇ ನಗರ ಅಂತದ್ದೇ ಉದ್ಯೋಗ ನೀಡಬಹುದೆಂಬ ಯಾವ ಭರವಸೆಯೂ ಇಲ್ಲ.

ಮಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದಿದ ಮಂಜುನಾಥ ಕರಿಯಪ್ಪಬಾಗಲಕೋಟೆಯ ಬಾದಾಮಿಯವರು. ಇತ್ತೀಚೆಗೆ ಶಿವಮೊಗ್ಗದಲ್ಲಿ ಕೆಲಸಕ್ಕೆ ಸೇರಿ ಮಾಸಿಕ ಹದಿನಾರು ಸಾವಿರ ವೇತನ ಪಡೆಯುತ್ತಿದ್ದರು. ತಿಂಗಳಿಗೆ ವೇತನದಲ್ಲಿ ಎಂಟು ಸಾವಿರವೂ ಉಳಿಯುತ್ತಿರಲಿಲ್ಲ. ಓದಿಗಾಗಿ ಶಿಕ್ಷಣ ಸಾಲ ಬೇರೆ ಮಾಡಿದ್ದರು. ಈಗ ಇವರು ಹುಟ್ಟೂರಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ದುಡಿದು ಸಾಲ ತೀರಿಸುವ ಬದ್ಧತೆ ಹೊಂದಿದ್ದಾರೆ. ಜತೆಗೆ ಹತ್ತು ಎಕರೆ ಒಣಬೇಸಾಯ ಮಾಡುವ ಉದ್ದೇಶವೂ ಇದೆ.

‘‘ಇಂಜಿನಿಯರಿಂಗ್ ಮಾಡಿದ್ದೇನೆ ಎಂದು ಪದವಿಯನ್ನು ತಲೆಯ ಮೇಲೆ ಹೊತ್ತು ಕುಳಿತುಕೊಳ್ಳಲು ಸಾಧ್ಯವೇ?. ಕೊರೋನ ಸೋಂಕು ಹರಡುವ ಸಂದರ್ಭದಲ್ಲಿ ಹಳ್ಳಿಯಲ್ಲೇ ಉಳಿಯುವುದು ಅನಿವಾರ್ಯವಾಗಿತ್ತು. ಹಳ್ಳಿಯಲ್ಲೀಗ ನರೇಗಾ ಕೆಲಸ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಸ್ವಾಭಿಮಾನದ ಜೀವನ ನಡೆಸುತ್ತಿದ್ದು ಇದರಿಂದ ನನಗೇನೂ ಬೇಸರವಿಲ್ಲ’’ ಎನ್ನುತ್ತಾರೆ ಮೆಕ್ಯಾನಿಕ್ ಇಂಜಿನಿಯರಿಂಗ್ ಓದಿದ ಕಾರ್ತಿಕ್ ಅವರು. ಇವರು ಮಂಡ್ಯ ಜಿಲ್ಲೆಯ ಹನುಮಂತಪುರ ಗ್ರಾಮದವರು. ಪಾಪ, ಇವರು ಬೆಂಗಳೂರಿನ ಕಂಪೆನಿಯೊಂದಕ್ಕೆ ಇನ್ನೇನು ಕೆಲಸಕ್ಕೆ ಹಾಜರಾಗಬೇಕೆನ್ನುವಾಗ ಲಾಕ್‌ಡೌನ್ ಶುರುವಾಯಿತು.

ಚಿತ್ರದುರ್ಗ ಜಿಲ್ಲೆಯ ಅಂಜನಾಪುರದ ದೀಪಶ್ರೀ ಎಂ.ಎಸ್ಸಿ. ಪದವೀಧರೆ. ಪ್ರತಿಭಾವಂತೆ. ಉಪನ್ಯಾಸಕಿಯಾಗಬೇಕೆಂಬ ಕನಸು ಹೊತ್ತು ಈಕೆ ಈಗ ಮನೆಯಲ್ಲೇ ಉಳಿದು ತಂದೆ ತಾಯಿಯರೊಂದಿಗೆ ಸೇರಿ ಕೂಲಿ ಕೆಲಸ ಮಾಡುತ್ತಾರೆ. ಬೀದರ್‌ನ ಪ್ರೀತಂ ಅರ್ಜುನ್ ಬಿ.ಎಸ್ಸಿ., ಬಿ.ಇಡಿ. ಓದಿದವರು. ನರೇಗಾದಲ್ಲಿ ಕಳೆದ 21 ದಿನ ದುಡಿದು 5,700 ರೂಪಾಯಿ ಸಂಪಾದಿಸಿದ್ದಾರೆ.

Writer - ನರೇಂದ್ರ ರೈ ದೇರ್ಲ

contributor

Editor - ನರೇಂದ್ರ ರೈ ದೇರ್ಲ

contributor

Similar News