ಮಡಿಕೇರಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಕದ್ದೊಯ್ದರು !

Update: 2020-09-02 18:12 GMT

ಮಡಿಕೇರಿ, ಸೆ.2: ಕೊಟ್ಟಿಗೆಯಲ್ಲಿ ಕಟ್ಟಿದ್ದ ಬೆಲೆಬಾಳುವ ಎತ್ತುಗಳನ್ನು ಕಳವು ಮಾಡಿರುವ ಘಟನೆ ಹಾರಂಗಿ ಸಮೀಪದ ಮಾವಿನಹಳ್ಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಕೆ.ಕೆ.ರಾಮಕೃಷ್ಣ ಎಂಬವರು ತಮ್ಮ ಮನೆಯ ಹಿಂಬದಿಯಲ್ಲಿರುವ ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಿದ್ದು, ಕೊಟ್ಟಿಗೆಯ ಹಿಂಬದಿಯ ತಂತಿ ಬೇಲಿಯನ್ನು ತುಂಡರಿಸಿದ ಕಳ್ಳರು, ಅಲ್ಲಿದ್ದ ಎತ್ತುಗಳನ್ನು ಅಪಹರಿಸಿದ್ದಾರೆ.

ಕೆ.ಕೆ.ರಾಮಕೃಷ್ಣ ಅವರು ಬಡ ರೈತರಾಗಿದ್ದು, ಅಲ್ಪ ಪ್ರಮಾಣದ ಜಮೀನು ಹೊಂದಿದ್ದಾರೆ. ಎತ್ತುಗಳಿಂದಲೇ ಉಳುಮೆ ಮಾಡಿ ಕೃಷಿ ಮಾಡುತ್ತಿದ್ದ ನಮಗೆ ಎತ್ತುಗಳನ್ನು ಕಳವು ಮಾಡಿರುವುದು ಬದುಕನ್ನೇ ಕಿತ್ತುಕೊಂಡಂತಾಗಿದೆ. ಸುಮಾರು 40 ಸಾವಿರ ರೂ. ಬೆಲೆ ಬಾಳುವ ಎತ್ತುಗಳು ಇದಾಗಿದ್ದವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು, ಹುದುಗೂರು, ಯಡವನಾಡು, ಕಾಳಿದೇವನ ಹೂಸೂರು, ಬಸವನತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ರಾತ್ರಿ ಸಮಯದಲ್ಲಿ ಜಾನುವಾರುಗಳ ಕಳವು ನಿರಂತರವಾಗಿ ನಡೆಯುತ್ತಿದ್ದು, ಸಮೀಪದ ಅರಣ್ಯದ ಕಡೆಗೆ ಮೇಯಲು ಬಿಟ್ಟ ಹಸುಗಳು ಕೂಡಾ  ಮರಳಿ ಮನೆ ಸೇರುತ್ತಿಲ್ಲ. ಹಾರಂಗಿಯ ಪಾಳುಬಿದ್ದ ಕಟ್ಟಡಗಳ ಹತ್ತಿರದಲ್ಲಿ ಜಾನುವಾರುಗಳು ಮೇಯುತ್ತಿರುವುದನ್ನು ಗಮನಿಸುವ ಕಳ್ಳರು ರಾತ್ರಿಯ ಸಮಯದಲ್ಲಿ ಅವುಗಳಿಗೆ ಬಾಳೆ ಹಣ್ಣು ನೀಡುವ ನೆಪದಲ್ಲಿ ಹಗ್ಗ ಕಟ್ಟಿ ಸಾಗಾಟ ಮಾಡಿರುವ ಘಟನೆಗಳೂ ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಎತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News