×
Ad

ಕೊಡಗಿಗು ಜಿಲ್ಲೆಯಾದ್ಯಂತ ‘ಕೈಲ್ ಪೊಳ್ದ್’ ಹಬ್ಬದ ಸಂಭ್ರಮ

Update: 2020-09-03 17:46 IST

ಮಡಿಕೇರಿ ಸೆ.3 : ಕೊಡಗಿನ ಕೃಷಿ ಸಂಸ್ಕೃತಿಯ ಭಾಗವಾದ ‘ಕೈಲ್ ಪೊಳ್ದ್’ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಭತ್ತದ ನಾಟಿ ಕಾರ್ಯದ ಬಳಿಕ ಬರುವ ಈ  ಕೈಲ್ ಪೊಳ್ದ್ ಹಬ್ಬ ಎನ್ನುವುದು ಕೊಡಗಿನ ರೈತಾಪಿ ವರ್ಗದಿಂದ ಆಚರಿಸಲ್ಪಡುವ ಆಯುಧ ಪೂಜೆಯೇ ಆಗಿದೆ. ಈ ಹಬ್ಬದಂದು ಆಯುಧಗಳಾದ ಕೋವಿ, ಕತ್ತಿ, ಕೃಷಿಯುಪಕರಣಗಳಿಗೆ ಕುಟುಂಬಸ್ಥರೆಲ್ಲ ಒಗ್ಗೂಡಿ ಪೂಜೆ ಸಲ್ಲಿಸಿ, ಮಾಂಸಾಹಾರವನ್ನು ಸೇವಿಸಿ ಸಂಭ್ರಮಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್‍ಮನೆಯಲ್ಲಿ ಗುರುವಾರ  ಕೈಲ್‍ಪೊಳ್ದ್ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು. ಬೆಳಗ್ಗೆ  ಕುಟುಂಬದ ಹಿರಿಯರು, ಪುರುಷರು, ಮಹಿಳೆಯರು ಹಾಗು ಮಕ್ಕಳೆಲ್ಲ ಐನ್‍ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು.

ಮದ್ಯಾಹ್ನ ನೆಲ್ಲಕ್ಕಿ ನಡುಬಾಡೆಯಲ್ಲಿ ಕೊಡವರ ಸಾಂಪ್ರದಾಯಿಕ ಆಯುಧಗಳಾದ ಕೋವಿ, ಒಡಿಕತ್ತಿ ಹಾಗು ಹಲವು ಆಯುಧಗಳನ್ನಿರಿಸಿ ತೋಕ್‍ಪೂ(ಗೌರಿ ಹೂ)ಗಳಿಂದ ಅಲಂಕರಿಸಿ, ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಖಾದ್ಯವನ್ನು ಇರಿಸಲಾಯಿತು. ಬಳಿಕ ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯನವರು ಆಯುಧಗಳಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು.

ಹಬ್ಬದೂಟದ ಬಳಿಕ ಹಿರಿಯರು ತೆಂಗಿಕಾಯಿಗೆ ಗುಂಡು ಹೊಡೆದ ನಂತರ ಪುರುಷರು, ಮಹಿಳೆಯರು ಹಾಗು ಮಕ್ಕಳು ಐನ್‍ಮನೆಯ ಮುಂದಿನ ಹಟ್ಟಿಯಲ್ಲಿ ತೆಂಗಿನಕಾಯಿಗೆ ಗುಂಡುಹೊಡೆದು ಸಂಭ್ರಮಿಸಿದರು.

ಈ ಸಂದರ್ಭ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪುತ್ತರಿರ ಭೂಮಿಕ ಅಚ್ಚಯ್ಯ ಹಾಗು ಪುತ್ತರಿರ ರಿಶಾಂಕ್‍ನಂಜಪ್ಪರಿಗೆ ಪುತ್ತರಿರ ಹರೀಶ್ ಅಯ್ಯಪ್ಪನವರು ನೀಡಿರುವ ಗೌರವ ಬಹುಮಾನವನ್ನು ಕುಟುಂಬದ ಹಿರಿಯರಾದ ಪುತ್ತರಿರಭೀಮಯ್ಯ ಹಾಗು ಪುತ್ತರಿರ ಟಿಟ್ಟುಕಾರ್ಯಪ್ಪನವರು ನೀಡಿ ಗೌರವಿಸಿದರು.

ಇದೇ ರೀತಿ ಜಿಲ್ಲೆಯ ಪ್ರತಿ ಗ್ರಾಮ ಗ್ರಾಮಗಳ ಮನೆ ಮನೆ ಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News