ರಾಜ್ಯದ 276 ಪಬ್ಲಿಕ್ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾರಂಭ: ಸಚಿವ ಸಂಪುಟ ಒಪ್ಪಿಗೆ

Update: 2020-09-03 13:26 GMT

ಬೆಂಗಳೂರು, ಸೆ. 3: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ರಾಜ್ಯದಲ್ಲಿನ ಎಲ್ಲ ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಿಲು ನಿರ್ಧರಿಸಿರುವ ರಾಜ್ಯ ಸರಕಾರ, ಮೊದಲ ಹಂತದಲ್ಲಿ ರಾಜ್ಯದಲ್ಲಿನ 276 ಪಬ್ಲಿಕ್ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಎಲ್‍ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಂಡಿದ್ದು, ಪಬ್ಲಿಕ್ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಶಿಕ್ಷಣ ನೀಡಲು ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ, ಅಗತ್ಯ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಕ್ಕಳಿಗೆ ಶಿಕ್ಷಣ ನೀಡಲು ಡಿಎಡ್ ಆದವರಿಗೆ ಮಾಂಟೆಸ್ಸರಿ ತರಬೇತಿ ನೀಡಲಾಗುತ್ತಿದೆ. ಈ ಶಿಕ್ಷಕರಿಗೆ 7,500 ರೂಪಾಯಿ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಆಯಾಗಳಿಗೆ 5 ಸಾವಿರ ರೂಪಾಯಿ ಗೌರವ ಸಂಭಾವನೆ ನೀಡಲು ತೀರ್ಮಾನಿಸಿದ್ದು, ಸರಕಾರಿ ಶಾಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಈ ತೀರ್ಮಾನ ಮಾಡಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.

ಜಲಾನಯನ ಅಭಿವೃದ್ಧಿ: ಅಂತರ್ಜಲ ಕುಸಿದಿರುವ ರಾಜ್ಯದ 20 ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಪ್ರದೇಶದ ಪುನರುಜ್ಜೀವನ ಯೋಜನೆ ರೂಪಿಸಲಾಗುವುದು ಎಂದ ಅವರು, ಒಟ್ಟು 600 ಕೋಟಿ ರೂ.ಗಳ ಈ ಯೋಜನೆಗೆ ರಾಜ್ಯ ಸರಕಾರ 180 ಕೋಟಿ ರೂ. ಹಾಗೂ ವಿಶ್ವಬ್ಯಾಂಕ್ 420 ಕೋಟಿ ರೂ.ಗಳನ್ನು ಒದಗಿಸಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕೋಲಾರ, ಬಾಗೇಪಲ್ಲಿ, ಚಳ್ಳಕೆರೆ, ಶಿಕಾರಿಪುರ, ಗುಂಡ್ಲುಪೇಟೆ, ಹರಪ್ಪನಹಳ್ಳಿ, ಶಿರಾ, ಅರಸಿಕೆರೆ, ಕಡೂರು, ಬೈಲಹೊಂಗಲ, ಹೀರೇಕೆರೂರು, ಹುನಗುಂದ, ಕುಂದಗೋಳ, ಬಸವನಬಾಗೇವಾಡಿ, ರೋಣ, ಜೇವರ್ಗಿ, ಬಸವಕಲ್ಯಾಣ, ಮಾನ್ವಿ, ಯಲಬುರ್ಗ ಹಾಗೂ ಶಹಾಪುರ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿ ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಜಲಾನಯನ ಪ್ರದೇಶಾಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಡಿಜಿಟಲ್ ಕಲಿಕೆ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ `ಡಿಜಿಟಲ್ ಕಲಿಕೆ'ಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 430 ಪ್ರಥಮ ದರ್ಜೆ ಕಾಲೇಜುಗಳು, 87 ಪಾಲಿಟೆಕ್ನಿಕ್ ಹಾಗೂ 14 ಇಂಜಿನಿಯರಿಂಗ್ ಈ ಯೋಜನೆ ಅನುಷ್ಟಾನಗೊಳಿಸಲಿದ್ದು, ಇದಕ್ಕೆ ತಗುಲುವ 34 ಕೋಟಿ ರೂ.ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಜೋಗ ಜಲಪಾತ ಅಭಿವೃದ್ಧಿ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ಅಭಿವೃದ್ಧಿಗೆ ಈ ಹಿಂದೆ ಬಿಆರ್‍ಎಲ್ ಸಂಸ್ಥೆಗೆ ನೀಡಿದ್ದ 450 ಕೋಟಿ ರೂ.ವೆಚ್ಚದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಇದೀಗ ಕರ್ನಾಟಕ ವಿದ್ಯುತ್ ನಿಗಮದ ಮೂಲಕ ಒಟ್ಟು 120 ಕೋಟಿ ರೂ.ವೆಚ್ಚದಲ್ಲಿ ರೋಪ್ ವೇ, ಉದ್ಯಾನವನ, ಜಲಕ್ರೀಡೆ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಮೇಲ್ದರ್ಜೆಗೆ: ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯತ್ ಅನ್ನು ಪುರಸಭೆಯನ್ನಾಗಿ, ಯಾದಗಿರಿ ಜಿಲ್ಲೆಯ ದೇವದುರ್ಗ ತಾಲೂಕು ಅರಕೇರಾ ಗ್ರಾಮ ಪಂಚಾಯತನ್ನು ತಾಲೂಕು ಆಗಿ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಹೊಸ ಟೆಂಡರ್: ತುರ್ತು ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ 108ಗೆ ಮುಂದಿನ ಏಳು ವರ್ಷಕ್ಕೆ ಹೊಸ ಟೆಂಡರ್ ಕರೆಯಲು ಸಂಪುಟ ಅನುಮೋದನೆ ನೀಡಿದೆ. ಆಂಬ್ಯುಲೆನ್ಸ್ ವ್ಯವಸ್ಥೆಗೆ ಕಿಲೋಮೀಟರ್ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಖಾಸಗಿ ಆಸ್ಪತ್ರೆಗಳೊಂದೊಂಗಿನ ಆಂಬ್ಯುಲೆನ್ಸ್ ಚಾಲಕರ `ಒಡನಾಟ' ತಪ್ಪಿಸಲು ಕ್ರಮ ವಹಿಸಿದ್ದು, ರೋಗಿ ಮತ್ತವರ ಸಂಬಂಧಿಕರ ಆಯ್ಕೆಗೆ ಆದ್ಯತೆ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಮರವಂತೆಯಲ್ಲಿ ಬಂದರು: ಧರ್ಮಸ್ಥಳದ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಉಡುಪಿ ಇವರಿಗೆ ಉಡುಪಿ ತಾಲೂಕಿನಲ್ಲಿ ಗುತ್ತಿಗೆ ನೀಡಲಾಗಿದ್ದ 10 ಎಕರೆ ಭೂಮಿಯನ್ನು ಮಾರುಕಟ್ಟೆ ದರದ ಬದಲಿಗೆ ಹಳೆಯ ಬಾಡಿಗೆ ಆಧಾರದ ಮೇಲೆ ಗುತ್ತಿಗೆ ಮುಂದುವರಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಡುಪಿ ಜಿಲ್ಲೆ ಮರವಂತೆಯಲ್ಲಿ 85 ಕೋಟಿ ರೂ.ವೆಚ್ಚದಲ್ಲಿ ಮೀನುಗಾರಿಕಾ ಬಂದರು ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಮುಂಡಗೋಡು ತಾಲೂಕಿನಲ್ಲಿ 5 ಗ್ರಾ.ಪಂ. ಗಳಲ್ಲಿನ 84 ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ಬೇಡ್ತಿ ನದಿಯ ಉಪನದಿಯಿಂದ ನೀರು ತುಂಬಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News