ಗ್ರಾಮ ಪಂಚಾಯತ್ ಚುನಾವಣೆ: ಕೋವಿಡ್-19 ಮಾರ್ಗಸೂಚಿ ಪ್ರಕಟಿಸಿದ ಚು.ಆಯೋಗ
ಬೆಂಗಳೂರು, ಸೆ.3: ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‍ಗಳ ಸಾರ್ವತ್ರಿಕ ಚುನಾವಣೆ ನಡೆಸುವ ವೇಳೆ ಅನುಸರಿಸಬೇಕಾದ ಮನ್ನೆಚ್ಚರಿಕಾ ಕ್ರಮಗಳನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಪ್ರತಿಯೊಬ್ಬರು ಮಾಸ್ಕ್ ಧರಿಸಿರಬೇಕು. ಚುನಾವಣಾ ಕೊಠಡಿಗಳಿಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರು ಸ್ಯಾನಿಟೈಸರ್ ಬಳಕೆ ಕಡ್ಡಾಯ. ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸೋಂಕು ನಿವಾರಕ ಕೊಠಡಿಯಲ್ಲಿಡಬೇಕು.
ಚುನಾವಣಾಧಿಕಾರಿಗಳು ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸುವಾಗ ತಮ್ಮ ಕೈಗಳನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸಬೇಕು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿರಬೇಕು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಂಡು ಒಬ್ಬೊಬ್ಬರಾಗಿ ನಾಮಪತ್ರ ಸಲ್ಲಿಸಬೇಕಾಗುತ್ತದೆ. ಹಾಗೂ ಕೋವಿಡ್ ಸೋಂಕಿತ ವ್ಯಕ್ತಿ ನಾಮಪತ್ರ ಸಲ್ಲಿಸಬೇಕಾದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬೇಕು.
ಚುನಾವಣಾ ಪ್ರಚಾರ: ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಮನೆ ಮನೆ ಭೇಟಿ ನೀಡಿ ಪ್ರಚಾರ ಮಾಡಬಹುದಾಗಿದೆ. ಪ್ರಚಾರದ ವೇಳೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಹಾಗೂ ಗುಂಪು ಗುಂಪಾಗಿ ತೆರಳಿ ಪ್ರಚಾರ ಮಾಡುವಂತಿಲ್ಲವೆಂದು ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.
-ಕೋವಿಡ್ ಸೋಂಕಿತ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ. ಖುದ್ದಾಗಿ ಸಾಮಾನ್ಯ ಜನರೊಂದಿಗೆ ಇಲ್ಲವೇ ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ.
-ಕೋವಿಡ್-19 ಹಿನ್ನೆಲೆಯಲ್ಲಿ ಮತಗಟ್ಟೆಗೆ ಗರಿಷ್ಟ 1000 ಮತದಾರರು ಮಾತ್ರ ಇರುವಂತೆ ಮತಗಟ್ಟೆಗಳನ್ನು ಗುರುತಿಸುವುದು.
-ಮತದಾನಕ್ಕೆ ನಿಗದಿಪಡಿಸಿದ ಕೊಠಡಿಯನ್ನು ಹಾಗೂ ಅಕ್ಕಪಕ್ಕದ ಕೊಠಡಿಗಳನ್ನು ಶೇ.1ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸುವುದು.
-ಮಾಸ್ಟರಿಂಗ್ ದಿನ ಸಂಜೆ ಮತದಾನ ಸಿಬ್ಬಂದಿಗೆ ಉಳಿದುಕೊಳ್ಳಲು ಸ್ಯಾನಿಟೈಸ್ ಮಾಡಿದ ಪಕ್ಕದ ಕೊಠಡಿಗಳನ್ನು ನೀಡಬೇಕು.