ಆ್ಯಂಬುಲೆನ್ಸ್ ಕಮಾಂಡ್ ಕಂಟ್ರೋಲ್ ರೂಮ್ ಸ್ಥಾಪನೆ: ಹೈಕೋರ್ಟ್ ನಿಂದ ಟೆಂಡರ್ ಪ್ರಕ್ರಿಯೆಯ ಮೇಲ್ವಿಚಾರಣೆ

Update: 2020-09-03 15:23 GMT

ಬೆಂಗಳೂರು, ಸೆ.3: ಆ್ಯಂಬುಲೆನ್ಸ್ ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳದಂತೆ ತಡೆಯಲು ಕಮಾಂಡ್ ಕಂಟ್ರೋಲ್ ರೂಮ್ ಸ್ಥಾಪಿಸಲು ರಾಜ್ಯ ಸರಕಾರ ಪ್ರಸ್ತಾಪಿಸಿರುವ ಟೆಂಡರ್ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುವುದಾಗಿ ಹೈಕೋರ್ಟ್ ಹೇಳಿದೆ.

ಈ ಕುರಿತು ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಗಳು ಸಿಲುಕಿಕೊಳ್ಳುತ್ತಿವೆ. ಕಮಾಂಡ್ ಕಂಟ್ರೋಲ್ ರೂಮ್ ತೆರೆದರೆ ಸಮಸ್ಯೆ ಬಗೆಹರಿಯಲಿದೆ. ಇದಕ್ಕಾಗಿ ಸರಕಾರ ಟೆಂಡರ್ ಪ್ರಕ್ರಿಯೆ ನಡೆಸಿದರೆ ಬಹಳ ವಿಳಂಬವಾಗುತ್ತದೆ. ಹೀಗಾಗಿ, ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ಕೋರಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲರು, ಕಮಾಂಡ್ ಸೆಂಟರ್ ಸ್ಥಾಪಿಸಲು ಟೆಂಡರ್ ಆಹ್ವಾನಿಸುವ ಪ್ರಕ್ರಿಯೆ 2017ರಿಂದಲೇ ನಡೆದಿದೆ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್ ಅಂತಿಮಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ವಿನಾಯಿತಿ ಪಡೆಯುವಂತೆ ಪೀಠ ಹೇಳುವುದಿಲ್ಲ. ಪ್ರಕ್ರಿಯೆ ವಿಳಂಬವಾಗದಂತೆ ಮೇಲ್ವಿಚಾರಣೆ ನಡೆಸಲಿದೆ. ಪ್ರಗತಿ ಕುರಿತು ಸೆ.30ರೊಳಗೆ ವರದಿ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News