ಮೋದಿ ವೈಫಲ್ಯ ಮುಚ್ಚಿಹಾಕಲು ಬಿಎಸ್‌ವೈ ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

Update: 2020-09-03 15:28 GMT

ಬೆಂಗಳೂರು, ಸೆ.3: ಕೇಂದ್ರ ಸರಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಎಸ್‍ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್‍ಬಿಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಾಲ ಮಾಡಿಯಾದರೂ ಕೊರೋನ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರ ಪರಿಹಾರ ನೀಡುತ್ತೇನೆ, ಸರಕಾರಿ ನೌಕರರ ಸಂಬಳಕ್ಕೆ ಸಾಲ ಮಾಡುತ್ತೇನೆ… ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಯೊಂದಕ್ಕೂ ಸಾಲದ ಮಂತ್ರ ಪಠಿಸುತ್ತಾ ಬಂದಿದ್ದಾರೆ. ಇವರೇನು ರಾಜ್ಯ ಸರಕಾರವನ್ನು ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020-21ರ ಅಂತ್ಯಕ್ಕೆ ಸಾಲದ ಪ್ರಮಾಣ 3,68,692 ಕೋಟಿ ರೂ.ಗಳಷ್ಟು ಆಗಬಹುದೆಂದು ಮುಖ್ಯಮಂತ್ರಿ ಬಜೆಟ್‍ನಲ್ಲಿ ಹೇಳಿದ್ದರು. ಕೊರೋನದಿಂದಾಗಿ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿದ ಪರಿಣಾಮ ಆರ್ಥಿಕ ಜವಾಬ್ದಾರಿಯನ್ನು ತೂಗಿಸಲು ಇನ್ನಷ್ಟು ಸಾಲ ಮಾಡುವುದು ಅನಿವಾರ್ಯವಾಗಬಹುದು. ವಿತ್ತೀಯ ಕೊರತೆಯೂ ಖಂಡಿತ ಹೆಚ್ಚಲಿದೆ. ಇದರ ಜೊತೆಗೆ ಜಿಎಸ್‍ಟಿ ಪರಿಹಾರಕ್ಕಾಗಿಯೂ ಆರ್‍ಬಿಐಯಿಂದ ಸಾಲ ಮಾಡಲು ರಾಜ್ಯ ಸರಕಾರ ಹೊರಟಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದರಿಂದ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ನಿಗದಿಪಡಿಸಿರುವ ಶೇ.25ರ ಮಿತಿಯನ್ನು ನಮ್ಮ ಒಟ್ಟು ಸಾಲದ ಮೊತ್ತ ಮೀರಲಿದ್ದು ರಾಜ್ಯ ದಿವಾಳಿ ಸ್ಥಿತಿಗೆ ತಲುಪಲು ಇನ್ನೇನು ಬೇಕು? ಈ ಸಾಲದ ಸುಳಿ ಕೇವಲ 11,324 ಕೋಟಿ ರೂ.ಗಷ್ಟೇ ಖಂಡಿತ ಸೀಮಿತವಾಗಲಾರದು. ಇದು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಬೇಕಾಗಿರುವ ಒಟ್ಟು ಜಿಎಸ್‍ಟಿ ಪರಿಹಾರ ಮೊತ್ತವಾದ 97 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದ ಪಾಲು ಅಷ್ಟೇ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಯಲ್ಲಿ ಕೇಂದ್ರ ಸರಕಾರ ಕೊರೋನ ದಿಂದಾಗಿ ಜಿಎಸ್‍ಟಿ ಒಟ್ಟು ನಷ್ಟ 2,35,00 ಕೋಟಿ ರೂ.ಎಂದು ಅಂದಾಜು ಮಾಡಿದೆ. ಇದನ್ನು ಕೇಂದ್ರ ಸರಕಾರ ತುಂಬಿಕೊಡಲಿದೆಯೇ? ಇಲ್ಲವೇ ಇದನ್ನು ಕೂಡಾ ರಾಜ್ಯ ಸರಕಾರದ ತಲೆಗೆ ಹೇರಿ ಸಾಲ ಮಾಡಲು ಆದೇಶ ನೀಡಲಿದೆಯೇ? ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬೀದಿಗಿಳಿದು ರಾಜ್ಯ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News