×
Ad

ಗಾಂಜಾ ಜಾಲಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ: ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮಚೀಂದ್ರ

Update: 2020-09-03 22:13 IST

ಚಿಕ್ಕಮಗಳೂರು, ಸೆ.3: ಲಾಕ್‍ಡೌನ್ ಅವಧಿಯಲ್ಲಿ ತರಕಾರಿ ವಾಹನಗಳ ಮೂಲಕ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಪೂರೈಕೆಯಾಗಿದ್ದು, ಗಾಂಜಾ ಮಾರಾಟ ದಂಧೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕೇವಲ 8 ತಿಂಗಳಲ್ಲಿ 26 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಲ್ಲದೇ 77 ಕೆ.ಜಿ. ಗಾಂಜಾ ವಶಪಡಿಸಿಕೊಂಡು 83 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ ಎಂದು ಎಸ್ಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರಿಗೆ ಈ ಸಂಬಂಧ ಮಾಹಿತಿ ನೀಡಿದ ಅವರು, ಜಿಲ್ಲೆಯ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷದ ಆರಂಭದಿಂದಲೇ ಗಾಂಜಾ ಮಾರಾಟ ಪ್ರಕರಣಕ್ಕೆ ಕಡಿವಾಣ ಹಾಕುವ ಸಲುವಾಗಿ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು, ಸದ್ಯ ಗಾಂಜಾ ಮಾರಾಟಗಾರರ ಜಾಲವನ್ನು ತುಂಡರಿಸಲಾಗಿದ್ದು, ಜಿಲ್ಲೆಯಲ್ಲಿ ಗಾಂಜಾ ಮಾರಾಟ ದಂಧೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ವಿವರಿಸಿದರು.

ಈ ವರ್ಷದ ಜುಲೈ ತಿಂಗಳಲ್ಲಿ ಇದೇ ರೀತಿ ಅತಿ ಮುಖ್ಯವಾದ ಒಂದು ಪ್ರಕರಣವನ್ನು ಪತ್ತೆ ಹಚ್ಚಿದ್ದು, ಒಟ್ಟು 55 ಕೆಜಿ ಗಾಂಜಾವನ್ನು ಒಂದೇ ಬಾರಿಗೆ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಈ ಪ್ರಕರಣದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾವನ್ನು ತರಲಾಗಿತ್ತು. ಇಲ್ಲಿಂದ ತರಕಾರಿ ತುಂಬಿಕೊಂಡು ಹೋಗಿದ್ದ ಗೂಡ್ಸ್ ವಾಹನದಲ್ಲಿ ವಾಪಾಸ್ ಬರುವಾಗ ಕ್ಯಾರೆಟ್ ಪ್ಯಾಕೆಟ್‍ಗಳ ಮಧ್ಯೆ ಗಾಂಜಾ ಇಟ್ಟು ಸಾಗಿಸಿದ್ದರು. ಒಟ್ಟು 88 ಗಾಂಜಾವನ್ನು ಈ ರೀತಿ ಸಾಗಿಸಲಾಗಿತ್ತು. ಈ ಪೈಕಿ 55 ಕೆಜಿಯಷ್ಟನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

2019ನೇ ಸಾಲಿನಲ್ಲಿ 14 ಪ್ರಕರಣಗಳನ್ನು ಪತ್ತೆ ಮಾಡಿ 10.7 ಕೆ.ಜಿ ಗಾಂಜಾ ವಶಪಡಿಸಿಕೊಂಡು 36 ಜನರನ್ನು ಬಂಧಿಸಲಾಗಿತ್ತು. ಈ ವರ್ಷ ಕೇವಲ 8 ತಿಂಗಳಲ್ಲಿ 83 ಜನರನ್ನು ಬಂಧಿಸಿ 77 ಕೆಜಿ ಗಾಂಶ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಪ್ರಕರಣದಲ್ಲಿ ಮೊದಲು ಕೆಳಹಂತದ ಆರೋಪಿಗಳಾದ ಗಾಂಜಾ ಗ್ರಾಹಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಮೊದಲನೆ, ಎರಡನೇ, ಮೂರನೇ ಹಾಗೂ ಮುಖ್ಯ ಗಾಂಜಾ ಪೂರೈಕೆ, ಮಾರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದರು.

55ಕೆಜಿ ಗಾಂಜಾ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ ಪ್ರಕರಣ ಪತ್ತೆಯಾದ ನಂತರ ಜಿಲ್ಲೆಯಲ್ಲಿ ಸ್ಥಳೀಯವಾಗಿ ಗಾಂಜಾ ಮಾರಾಟ ಪ್ರಕರಣಗಳು ಕಡಿಮೆಯಾಗಿವೆ. ಹೆಚ್ಚಾಗಿ ಗಾಂಜಾವನ್ನು ಯುವಕರಿಗೆ ಪೂರೈಸಲಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ 1 ಟನ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ನಮಗೆ ಬರುವ ಮಾಹಿತಿ ಆಧರಿಸಿ ಅಕ್ಕಪಕ್ಕದ ಜಿಲ್ಲೆಯ ಪೊಲೀಸರೊಂದಿಗೆ ನಿರಂತರವಾಗಿ ಮಾಹಿತಿ ಹಂಚಿಕೊಂಡು ಗಾಂಜಾ ಜಾಲವನ್ನು ಭೇದಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಎಸ್ಪಿ ತಿಳಿಸಿದರು.

ಜಿಲ್ಲೆಯಲ್ಲಿ ಗಾಂಜಾ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಾಹಿತಿದಾರರು ಮತ್ತು ಪೂರೈಕೆದಾರರಿಗೆ ಸಂಬಂಧಿಸಿ ಜಾಲವೊಂದನ್ನು ಸೃಷ್ಠಿಸಲಾಗುತ್ತಿದೆ. ಅವರ ಚಲನ ವಲನವನ್ನು ಗಮನಿಸಿ ಗಾಂಜಾ ದಂಧೆಯ ಹಿನ್ನೆಲೆಯನ್ನು ಪತ್ತೆಹಚ್ಚಲಾಗುವುದು. ಅದರ ಆಧಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಪೂರೈಕೆ ಮಾಡುವ ಪ್ರಮುಖ ಆರೋಪಿಯನ್ನು ಹಿಡಿಯಲಾಗುತ್ತದೆ ಎಂದ ಎಸ್ಪಿ, ಬೆಂಗಳೂರಿನ ಚಿತ್ರೋದ್ಯಮದಲ್ಲಿ ತಲ್ಲಣ ಸೃಷ್ಠಿಸಿರುವ ಕೆಮಿಕಲ್‍ಗಳಿಂದ ತಯಾರಿಸಿದ ಬ್ರೌನ್‍ ಶುಗರ್, ಹೆರಾಯಿನ್‍ ನಂತಹ ಸಿಂಥಟಿಕ್ ಡ್ರಗ್‍ನ ಜಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ದನಗಳ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಗರ ಸಮೀಪದ ತೇಗೂರು ಗ್ರಾಮದಲ್ಲಿ ಕರುವೊಂದನ್ನು ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ವಾಹನದ ನಂಬರ್ ಪ್ಲೇಟ್ ಬದಲಾಯಿಸಿರುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಗೋಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಚೆಕ್‍ಪೋಸ್ಟ್ ತೆರೆದು ಗೋಕಳ್ಳರ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಂಜಾ ಬೆಳೆದ ಪ್ರಕರಣ ಎಲ್ಲೂ ಪತ್ತೆಯಾಗಿಲ್ಲ. ಕಳೆದ ವರ್ಷ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕೆಲವರು ಬೆಳೆದಿರುವ ಒಂದು ಪ್ರಕರಣ ವರದಿಯಾಗಿತ್ತು. ಅದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಗಾಂಜಾ ಬೆಳೆದ ಯಾವ ಪ್ರಕರಣಗಳೂ ಪತ್ತೆಯಾಗಿಲ್ಲ.
- ಅಕ್ಷಯ್ ಮಚೀಂದ್ರ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News