ಡ್ರಗ್ಸ್ ದಂಧೆ ತಡೆಯಲು ಪೊಲೀಸ್ ಇಲಾಖೆ ಕ್ರಮವಹಿಸಿಲ್ಲ: ಶಾಸಕ ಡಿ.ಸಿ. ತಮ್ಮಣ್ಣ ಆರೋಪ
ಮಂಡ್ಯ, ಸೆ.3: ಪೊಲೀಸ್ ಇಲಾಖೆ ಡ್ರಗ್ಸ್ ದಂಧೆ ನಿಯಂತ್ರಿಸಲು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ದಕ್ಷ ಇಲಾಖೆಯಾಗಿರುವ ಪೊಲೀಸ್ ಇಲಾಖೆಯಲ್ಲಿ ಒಂದು ಕಡೆ ಪ್ರಾಮಾಣಿಕತೆ ಇದ್ದರೆ, ಇನ್ನೊಂದು ಕಡೆ ಎಲ್ಲೋ ಡ್ರಗ್ಸ್ ನಂಥ ಅವ್ಯವಹಾರಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲವು ಅಧಿಕಾರಿಗಳು ಇರುವುದರಿಂದ ಇಂಥ ದಂಧೆಗಳು ನಡೆಯುತ್ತಿವೆ ಎಂದು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಮಾದಕ ವಸ್ತುಗಳ ವ್ಯಸನಿಗಳು ನಗರ ಮಾತ್ರವಲ್ಲ, ಗ್ರಾಮಾಂತರ ಪ್ರದೇಶದಲ್ಲೂ ಬೆಳೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ದಂಧೆ ಪೊಲೀಸ್ ಇಲಾಖೆಯ ಪೇದೆಯಿಂದ ಹಿಡಿದು ಮೇಲಾಧಿಕಾರಿಗಳಿಗೂ ಗೊತ್ತಿದೆ. ನಾವು ಕೂಡ ಸೂಕ್ಷ್ಮವಾಗಿ ಗಮನಿಸಿ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿ ಕ್ರಮವಹಿಸುವಂತೆ ಒತ್ತಾಯಿಸಿದ್ದೇವೆ. ಆದರೆ, ಇಲ್ಲಿಯವರೆಗೂ ಅದರ ಬಗ್ಗೆ ಗಮನಹರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರು ಕೊರೋನ ವಾರಿಯರ್ಸ್ ಗಳಾಗಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದು, ಅವರನ್ನು ಹೂಮಳೆಗೆರೆದು ಸನ್ಮಾನಿಸುತ್ತಿದ್ದೇವೆ. ಆದರೆ, ಡ್ರಗ್ಸ್ ದಂಧೆ ಪೊಲೀಸ್ ಇಲಾಖೆಗೂ ಗೊತ್ತಿದ್ದರೂ ಕಡಿವಾಣ ಹಾಕದೆ, ಗೊತ್ತಿಲ್ಲದವರಂತೆ ಮೌನವಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ದಂಧೆ ನಿಲ್ಲಿಸಿ, ಯುವಜನರ ಶಕ್ತಿ ಕಾಪಾಡಬೇಕು. ಎಲ್ಲೆಲ್ಲಿ ಮಾರಾಟವಾಗುತ್ತಿದೆ ಹಾಗೂ ಸೇವನೆ ಮಾಡುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇನ್ನು ಮುಂದೆ ಮಾದಕ ವಸ್ತುಗಳು ರಾಜ್ಯದಲ್ಲಿ ಯುವಜನತೆಯ ಕೈಗೆ ಸಿಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.