ಹಳೇ ನೋಟು ಬದಲಾವಣೆ ದಂಧೆ: ಮೂವರ ಬಂಧನ, 35 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳು ಜಪ್ತಿ
ಬೆಂಗಳೂರು, ಸೆ.4: ಅಮಾನ್ಯೀಕರಣಗೊಂಡ ಗರಿಷ್ಠ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 35 ಲಕ್ಷ ಮೌಲ್ಯದ ನಿಷೇಧಿತ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಕುಣಿಗಲ್ ತಾಲ್ಲೂಕು ಕೊತ್ತಗೆರೆಯ ಪ್ರಸನ್ನ(40), ಶ್ರೀನಿವಾಸ್(34) ಹಾಗೂ ಪ್ರಕಾಶ್ ನಗರದ ರಾಘವೇಂದ್ರ(41) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ನಗರದ ಮಿಲ್ಕ್ ಕಾಲನಿಯ ಸರ್ವೀಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬಂದ ಕಾರನ್ನು ಸುಬ್ರಹ್ಮಣ್ಯಪುರಂ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ನಿಷೇಧಿತ ನೋಟುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯ ಜಯಂತ್ ಎಂಬವರಿಗೆ ಹಳೆಯ ನೋಟುಗಳನ್ನು ಕೊಟ್ಟು ಶೇ.10ರಷ್ಟು ಕಮಿಷನ್‍ನಲ್ಲಿ ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು ಎಂದು ಬಾಯ್ಬಿಟ್ಟಿದ್ದಾರೆ.
ಆರೋಪಿ ಜಯಂತ್‍ಗೆ ರಿಸರ್ವ್ ಬ್ಯಾಂಕ್‍ನಲ್ಲಿ ಅಧಿಕಾರಿಯೊಬ್ಬರು ಪರಿಚಯವಿದ್ದು, ಅವರ ಮೂಲಕ ನೋಟುಗಳ ವಿನಿಮಯ ಮಾಡಿಸಿಕೊಳ್ಳುತ್ತಿದ್ದುದಾಗಿ ತಿಳಿಸಿದ್ದರು ಎಂದು ತನಿಖೆಯಲ್ಲಿ ಕಂಡು ಬಂದಿದ್ದು, ಬಂಧಿತರಿಂದ 35 ಲಕ್ಷ ಮೌಲ್ಯದ ನಿಷೇಧಿತ 500 ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.