ಕೇಂದ್ರ ಸರಕಾರ ಹಿಂದೂ ರಾಷ್ಟ್ರ ಘೋಷಿಸುವ ಹುನ್ನಾರ ನಡೆಸುತ್ತಿದೆ: ಎಚ್.ಎಸ್.ದೊರೆಸ್ವಾಮಿ

Update: 2020-09-04 16:02 GMT

ಬೆಂಗಳೂರು, ಸೆ.4: ಕೇಂದ್ರ ಸರಕಾರ ದೇಶದಲ್ಲಿ ಒಂದು ಭಾಷೆ, ಒಂದು ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಇದನ್ನು ಮುಂದುವರಿಸಿ ಭಾರತವನ್ನು ಹಿಂದೂ ರಾಷ್ಟ್ರ ಘೋಷಿಸುವ ಹುನ್ನಾರ ನಡೆಸುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹುತಾತ್ಮರಾಗಿ ಮೂರು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ಗೌರಿ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಂತ್ರಿಗಳು ಆಡಳಿತ ನಡೆಸುತ್ತಿಲ್ಲ. ಬದಲಿಗೆ, ಪಟ್ಟಭದ್ರ ಹಿತಾಸಕ್ತಿಗಳ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಒಂದು ಭಾಷೆ ಹಾಗೂ ಹಿಂದೂರಾಷ್ಟ್ರ ಜಾರಿ ಮಾಡುವ ಹುನ್ನಾರವಾಗಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಗೌರಿ ಲಂಕೇಶ್ ಬಳಗ ವಿಸ್ತಾರವಾಗಿ ಹರಡಿಕೊಂಡಿದೆ. ಅವರೆಲ್ಲರೂ ಒಂದು ವೇದಿಕೆಗೆ ಬಂದು ದೇಶದ ಸಾರ್ವಭೌಮತೆಯನ್ನು, ರಾಜ್ಯಾಂಗ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಲಿಷ್ಠ ಸಂಘಟನೆಯನ್ನು ಕಟ್ಟಬೇಕಿದೆ ಎಂದು ಅವರು ತಿಳಿಸಿದರು.

ಜೈ ಭೀಮ್ ಆರ್ಮಿಯ ರಾಷ್ಟ್ರಾಧ್ಯಕ್ಷ ಚಂದ್ರಶೇಖರ್ ಆಝಾದ್ ಮಾತನಾಡಿ, ನಮ್ಮ ದೇಶದಲ್ಲಿ ಯತಾಸ್ಥಿತಿವಾದಿ, ಜಾತಿವಾದಿ ಹಾಗೂ ಕೋಮುವಾದಿ ಶಕ್ತಿಗಳನ್ನು ವಿರೋಧಿಸುತ್ತಲೇ ಬಂದಿರುವ ದೊಡ್ಡ ಮಹಿಳಾ ಪರಂಪರೆಯಿದೆ. ದೇಶದ ಸಾಕ್ಷರತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾವಿತ್ರಿ ಬಾಪುಲೆ, ರಮಾಬಾಯಿ ಸೇರಿದಂತೆ ಹಲವು ಆದರ್ಶ ಮಹಿಳೆಯರಿದ್ದಾರೆ. ಆ ಪರಂಪರೆಯಲ್ಲಿ ಗೌರಿ ಲಂಕೇಶ್‍ರವರು ಸೇರಿದ್ದಾರೆ ಎಂದು ತಿಳಿಸಿದರು.

ಕೋಮುವಾದಿಗಳು ಗೌರಿ ಲಂಕೇಶ್‍ರವರ ದೇಹವನ್ನು ಹತ್ಯೆ ಮಾಡಿರಬಹುದು. ಆದರೆ, ಅವರ ಚಿಂತನೆಗಳು ಸದಾ ಇರುತ್ತದೆ. ಅವರ ಹಾಕಿಕೊಟ್ಟ ಮೌಲ್ಯಗಳಡಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಮುಖ್ಯವಾಗಿ ಧೈರ್ಯ, ಪ್ರಾಮಾಣಿಕೆ ಹಾಗೂ ತ್ಯಾಗ ಮನೋಭಾವದಿಂದ ಕೋಮುವಾದಿಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಸಿನೆಮಾ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ದೇಶದಲ್ಲಿ ನಡೆಯುವ ಜನವಿರೋಧಿ ಘಟನೆಗಳಿಗೆ ನನ್ನ ತಂದೆ ಲಂಕೇಶ್ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳುತ್ತಿದ್ದೆವು. ಆದರೆ, ಈಗ ಸಿಎಎ, ಎನ್‍ಆರ್‍ಸಿ ಹಾಗೂ ಆನಂದ್ ತೇಲ್ತುಂಬ್ಡೆ, ವರವರರಾವ್ ಸೇರಿದಂತೆ ಪ್ರಗತಿಪರರ ಬಂಧನವಾಗುತ್ತಿರುವ ಸನ್ನಿವೇಶದಲ್ಲಿ ಗೌರಿ ಲಂಕೇಶ್ ಇದ್ದಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದು ನೆನೆಸಿಕೊಳ್ಳುತ್ತೇವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿದರು. ಗೌರಿ ಮೀಡಿಯಾ ಟ್ರಸ್ಟ್ ನ ದೊಡ್ಡಿಪಾಳ್ಯ ನರಸಿಂಹಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಜನಶಕ್ತಿಯ ವಾಸು ಸೇರಿದಂತೆ ಹಲವರು ಭಾಗವಹಿಸಿದ್ದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ. ಎಸ್‍ಐಟಿ(ವಿಶೇಷ ತನಿಖಾ ದಳ) ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಾನಾ ಕಾರಣಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಕುಂಠಿತವಾಗುತ್ತಿದೆ. ಹೀಗಾಗಿ ರಾಜ್ಯ ಸರಕಾರ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ(ಫಾಸ್ಟ್ ಟ್ರಾಕ್ ಕೋರ್ಟ್) ರಚಿಸಲಿ.

-ಕವಿತಾ ಲಂಕೇಶ್, ಸಿನೆಮಾ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News