ರಾಜ್ಯದಲ್ಲಿ ಮಾದಕ ಜಾಲ ಮಟ್ಟ ಹಾಕುವವರೆಗೆ ತನಿಖೆ ನಿಲ್ಲುವುದಿಲ್ಲ: ಗೃಹ ಸಚಿವ ಬೊಮ್ಮಾಯಿ

Update: 2020-09-04 16:14 GMT

ಬೆಂಗಳೂರು, ಸೆ. 4: `ರಾಜ್ಯದಲ್ಲಿ ಮಾದಕ ದ್ರವ್ಯ(ಡ್ರಗ್ಸ್) ದಂಧೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಅಥವಾ ಮಧ್ಯಪ್ರವೇಶ ಮಾಡುವುದಿಲ್ಲ. ಸಿಸಿಬಿ ಪೊಲೀಸರ ತನಿಖೆ ಮುಕ್ತವಾಗಿ ನಡೆದಿದೆ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾದಕ ದ್ರವ್ಯದ ದಂಧೆಯನ್ನು ಮಟ್ಟ ಹಾಕಲಾಗುವುದು. ತನಿಖೆ ಪ್ರಗತಿ ಹಂತದಲ್ಲಿದ್ದು, ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಮಾದಕ ದ್ರವ್ಯದ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದು, ಈ ಜಾಲವನ್ನು ನಿಯಂತ್ರಿಸಲು ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಇತರೆ ನಗರಗಳಲ್ಲಿಯೂ ಮಾದಕ ದ್ರವ್ಯದ ಜಾಲ ವ್ಯಾಪಿಸಿದ್ದು, ಅಲ್ಲಿಯೂ ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಮಾದಕ ದ್ರವ್ಯ ಜಾಲ ನಿಯಂತ್ರಣ ನಿಟ್ಟಿನಲ್ಲಿ ನಾಳೆ(ಸೆ.5) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಮಾಹಿತಿ ನೀಡಿದರು.

ಚಿತ್ರನಟಿ ರಾಗಿಣಿ ನಿವಾಸದ ಮೇಲಿನ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅದು ತನಿಖೆಯ ಭಾಗವೇ ಆಗಿದೆ. ಕನ್ನಡ ಚಿತ್ರರಂಗದ ಕೆಲವರಿಗೆ ಮಾದಕ ಲೋಕದ ನಂಟಿರುವ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ. ಮಾದಕ ದ್ರವ್ಯ ಜಾಲದ ಮೂಲಪತ್ತೆ ಹಚ್ಚುವ ಕಾರ್ಯ ನಡೆದಿದೆ. ಕಾನೂನು ಪ್ರಕಾರ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿಸಿಬಿ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಮಾದಕ ವಸ್ತು ಸಾಗಾಣಿಕೆಗೆ ಕಡಿವಾಣ ಹಾಕಲು ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹದ್ದಿನಗಣ್ಣಿಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಗಡಿಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಾಜ್ಯದಲ್ಲಿ ಮಾದಕ ದ್ರವ್ಯದ ಜಾಲವನ್ನು ಸಂಪೂರ್ಣ ಮಟ್ಟ ಹಾಕುವವರೆಗೆ ತನಿಖೆ ನಿಲ್ಲುವುದಿಲ್ಲ. ಡ್ರಗ್ ಪೆಡ್ಲರ್ ಗಳು ಎಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News