ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿಗೆ ವೆಂಟಿಲೇಟರ್ ಕೊರತೆಯೇ ಕಾರಣ: ವೈ.ಎಸ್.ವಿ. ದತ್ತ ಆರೋಪ

Update: 2020-09-05 11:54 GMT

ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ಸಾವಿಗೆ ವೆಂಟಿಲೇಟರ್ ಕೊರತೆಯೇ ಪ್ರಮುಖ ಕಾರಣ. ಇದರ ಇದರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊರಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಅಪ್ಪಾಜಿಗೌಡರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬೆಡ್ ಹಾಗೂ ವೆಂಟಿಲೇಟರ್ ಇರಲಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೂ ಅಲ್ಲಿಯೂ ವೆಂಟಿಲೇಟರ್ ಸಕಾಲದಲ್ಲಿ ಸಿಗಲಿಲ್ಲ. ಇದರಿಂದಾಗಿ ಅವರು ನಮ್ಮನ್ನಗಲಿದರು ಎಂದರು.

ಜಿಲ್ಲಾಡಳಿತ ಶಿವಮೊಗ್ಗ ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇಲ್ಲ, ಹಾಸಿಗೆಗಳ ಕೊರತೆ ಇಲ್ಲ ಎಂದು ಹೇಳುತ್ತಿದೆ. ಆದರೆ ಮಾಜಿ ಶಾಸಕರಿಗೆ ವೆಂಟಿಲೇಟರ್ ಸಿಗದೇ ಪ್ರಾಣ ಹೋಯಿತು. ಮಾಜಿ ಜನಪ್ರತಿನಿಧಿಯ ಪರಿಸ್ಥಿತಿಯೇ ಈ ರೀತಿಯಾದರೆ ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವೂ ಸಹ ಪ್ರತಿನಿತ್ಯ ಕೋವಿಡ್ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಕೊರತೆಯಾಗದಂತೆ ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡುತ್ತಿದೆ ಎಂದು ಹೇಳುತ್ತಿದೆ. ಆದರೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದು ದೂರಿದರು.

ಸಂಪ್ರದಾಯದಂತೆ 11ನೇ ದಿನದಂದು ಅಪ್ಪಾಜಿಗೌಡರವರ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ನಿನ್ನೆ ಅವರ ಕುಟುಂಬದವರೊಂದಿಗೆ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಸೆ.13ರಂದು ಭದ್ರಾವತಿ ನಗರದ ಚರ್ಚ್ ಮೈದಾನದಲ್ಲಿ ಬೆಳಗ್ಗೆ ೧೧ಗಂಟೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ, ಮಾಸ್ಕ್‌ಗಳ ಬಳಕೆ ಕಡ್ಡಾಯಗೊಳಿಸಿ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅಭಿಮಾನಿ ಬಳಗ ನಿರ್ಧರಿಸಿದೆ. ಇದಕ್ಕೆ ಜಿಲ್ಲಾಡಳಿತದ ಒಪ್ಪಿಗೆ ಕೋರಿ ಶನಿವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡಾ ಸಲ್ಲಿಸಲಾಗಿದೆ ಎಂದರು.

ಮೃತರ ಆತ್ಮಕ್ಕೆ ಶಾಂತಿಕೋರಲು ಅಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಪಂ ಸದಸ್ಯರಾದ ಯೋಗೀಶ್ ಗೌಡ, ಎಂ.ಎಸ್.ಮಣಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕುಮಾರ್, ಕರುಣಾಕರ ಮೂರ್ತಿ, ಶಿಮುಲ್ ಅಧ್ಯಕ್ಷ ಆನಂದ್ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News