ರಾಗಿಣಿಗೂ ಬಿಜೆಪಿಗೂ ಸಂಬಂಧವಿಲ್ಲ: ಸಚಿವ ಸಿ.ಟಿ.ರವಿ

Update: 2020-09-05 13:08 GMT

ಚಿಕ್ಕಮಗಳೂರು, ಸೆ.5: ಡ್ರಗ್ ಮಾಫಿಯಾದ ಬಗ್ಗೆ ಸಮಗ್ರ ತಿನಿಖೆ ನಡೆಯುತ್ತಿದೆ. ತನಿಖೆ ಯಾರ ಮನೆ ಬಾಗಿಲಿಗೆ ಬರುತ್ತದೋ ಗೊತ್ತಿಲ್ಲ, ತನಿಖೆ ನಂತರ ಎಲ್ಲಾ ವಿಷಯ ಬಹಿರಂಗವಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು. ಡ್ರಗ್ಸ್ ಪ್ರಕರಣದಲ್ಲಿ ಚಿತ್ರನಟಿ ರಾಗಿಣಿ ಅವರನ್ನು ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ವಿಚಾರಣೆ ಮಾಡಲಾಗುತ್ತಿದೆ. ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆಂದು ಮಾರ್ಮಿಕವಾಗಿ ಹೇಳಿದ್ದೇನೆ. ಒತ್ತಡ ನಮ್ಮ ಮೇಲೆ ತರುತ್ತಿದ್ದಾರೆ ಎಂದು ಹೇಳಿಲ್ಲ, ಯಾರು ಮಾತು ಕೇಳುತ್ತಾರೆ ಅನಿಸುತ್ತೋ ಅವರ ಮೇಲೆ ಒತ್ತಡ ತರುತ್ತಾರೆ. ನಮ್ಮ ಸರಕಾರ ಇಂತಹ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ಒತ್ತಡ ತರಲು ಸಾಧ್ಯವಿಲ್ಲ, ಸರಕಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದರು.

ಡ್ರಗ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಮತ್ತು ಬಿಜೆಪಿ ಮುಖಂಡರ ಜೊತೆಗಿನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಡ್ರಗ್ಸ್ ಪ್ರಕರಣದ ಬಗ್ಗೆ ತನಿಖಾ ತಂಡ ಗಂಭೀರವಾಗಿ ತನಿಖೆ ನಡೆಸುತ್ತಿದೆ. ರಾಜಕಾರಣಿಗಳ ಜೊತೆ ಯಾರ್ಯಾರೋ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅವರು ಯಾರು ಎನ್ನುವುದೇ ರಾಜಕಾರಣಿಗಳಿಗೆ ಗೊತ್ತಿರುವುದಿಲ್ಲ, ಸೆಲ್ಫಿ ತೆಗೆದುಕೊಂಡವರೆಲ್ಲ ನಮ್ಮ ಹಿಂಬಾಲಕರಲ್ಲ. ನಮ್ಮಗೂ ಅವರಿಗೂ ಏನಾದರೂ ವ್ಯವಹಾರಿಕ ಸಂಬಂಧ ಇದೆಯೇ ಎಂಬ ಬಗ್ಗೆ ಮಾತ್ರ ತನಿಖೆಯಾಗಬೇಕು. ವ್ಯವಹಾರಿಕ ಸಂಬಂಧ ಇದ್ದು ಡ್ರಗ್ ಮಾಫಿಯದ ಜೊತೆ ಯಾವುದೇ ವ್ಯಕ್ತಿಗಳಿದ್ದರೂ ಗಂಭೀರವಾಗಿ ತನಿಖೆ ನಡೆಯುತ್ತದೆ. ಡ್ರಗ್ಸ್ ಮಾಫಿಯಾವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂಬುದುರಲ್ಲಿ ಯಾವುದೇ ಗೊಂದಲ ಬೇಡ ಎಂದು ಸಿ.ಟಿ.ರವಿ ಹೇಳಿದರು.

ಕೆಲವರು ಹಿಂದೆ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡಿದ್ದಾರೆ. ಅಂಥವರು ಸರಕಾರವನ್ನು ಓಲೈಸಿಕೊಳ್ಳುವ, ಒತ್ತಡ ತರುವ ಕೆಲಸ ಮಾಡಬಹುದು. ನಮ್ಮ ಸರಕಾರದಲ್ಲಿ ಇಂತವರ ಜೊತೆ ರಾಜಿ ಮಾಡಿಕೊಂಡು ಯಾರೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದ ಸಿ.ಟಿ.ರವಿ, ತನಿಖಾ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರೆ, ಸರಕಾರ ಒತ್ತಡಕ್ಕೆ ಮಣಿದಿದ್ದರೇ ಪ್ರಕರಣದ ಬಗ್ಗೆ ಇಷ್ಟು ಸಮಗ್ರವಾದ ತನಿಖೆ ನಡೆಯುತ್ತಿರಲಿಲ್ಲ. ರಾಜ್ಯದ ಇತಿಹಾಸದಲ್ಲಿ ಡ್ರಗ್ ಪ್ರಕರಣಗಳು ಹೊಸದಲ್ಲ, ಪ್ರಕರಣವನ್ನು ಸರಕಾರ ಇಷ್ಟು ಗಂಭೀರವಾಗಿ ತೆಗೆದುಕೊಂಡಿರುವುದು ಮಾತ್ರ ಇದೇ ಮೊದಲು ಎಂದರು.

ಡ್ರಗ್ ಮಾಫಿಯಾದಲ್ಲಿ ಅಂತಾರಾಷ್ಟ್ರೀಯ ಸಂಬಂಧದ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ತನಿಖೆ ಪ್ರಾಥಮಿಕ ಹಂತದಲ್ಲಿದೆ. ತನಿಖೆ ನಂತರ ಹೊಸ ಆಯಾಮಗಳೇನಾದರೂ ಸಿಕ್ಕಿದರೆ, ತನಿಖಾ ತಂಡ ಕೇಂದ್ರ ಸರಕಾರದಿಂದ ಸಹಾಯ ಪಡೆಯಬಹುದು. ತನಿಖೆಯ ರೂಪರೇಷೆ ನೋಡಿಕೊಂಡು ತೀರ್ಮಾನ ಮಾಡಬೇಕೇ ಹೊರತು, ಈಗಲೇ ನಿರ್ಣಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. 

ಕೊಡಗಿನಲ್ಲಿ ಈ ಬಾರಿ ಭಾರೀ ಭೂಕುಸಿತ ಉಂಟಾಗಿತ್ತು. ಹಾಗಾಗಿ 10 ತಿಂಗಳು ಮನೆ ಬಾಡಿಗೆ ನೀಡಲು ಆದೇಶ ಹೊರಡಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ 34 ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಈ ಮನೆಗಳ ಮಾಲಕರಿಗೆ 10 ತಿಂಗಳ ಮನೆ ಬಾಡಿಗೆ ನೀಡಬೇಕೆಂದು ಸಿಎಂ ಹಾಗೂ ಕಂದಾಯ ಸಚಿವರನ್ನು ಮನವಿ ಮಾಡಿದ್ದೇನೆ.
- ಸಿ.ಟಿ.ರವಿ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News