ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ 8.40ಕೆ.ಜಿ ಗಾಂಜಾ ವಶ; ಇಬ್ಬರ ಬಂಧನ

Update: 2020-09-05 13:25 GMT

ಮಡಿಕೇರಿ,ಸೆ.5: ಗಾಂಜಾ ಬೆಳೆಸಿದ ಹಾಗೂ ಮಾರಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 8.40ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಮರಗೆಣಸು ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡವನ್ನು ಬೆಳೆದಿರುವುದಾಗಿ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಅದೇ ಗ್ರಾಮದ ನಾಗಣ್ಣ(62) ಎಂಬವರನ್ನು ಬಂಧಿಸಿ, ಸುಮಾರು 7.5 ಅಡಿಯಷ್ಟು ಬೆಳೆದಿದ್ದ 6.40ಕೆ.ಜಿ. ತೂಕದ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮ ಗಫೂರ್ ಎಂಬವರಿಂದ ಜಾಗವನ್ನು ಭೋಗ್ಯಕ್ಕೆ ಪಡೆದು ಮರಗೆಣಸು ಬೆಳೆದಿದ್ದ ನಾಗಣ್ಣ ಅದರ ಮಧ್ಯದಲ್ಲಿ ಗಾಂಜಾ ಗಿಡವನ್ನು ಬೆಳೆದಿದ್ದಾಗಿ ಹೇಳಲಾಗಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಜೂರು ಗ್ರಾಮದ ಶಾಲೆಯ ಬಳಿಯ ಬಸ್ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ತೊರೆನೂರು ಗ್ರಾಮದ ಮಾಜಿ ಗ್ರಾಮ ಲೆಕ್ಕಿಗ ಲಕ್ಷ್ಮಪ್ಪ(75)ಎಂಬವರನ್ನು ಬಂಧಿಸಲಾಗಿದೆ.  

ಆರೋಪಿಯ  ಬಳಿ ಇದ್ದ ಸುಮಾರು 2 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಹಾಗೂ ಸೋಮವಾರಪೇಟೆ ಉಪವಿಭಾಗದ ಉಪಾಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್‍ಐ ಗಣೇಶ್,  ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ನಂದೀಶ್, ಎಎಸ್‍ಐ ಗೋಪಾಲ್, ಸಿಬ್ಬಂದಿಗಳಾದ ಜಯಪ್ರಕಾಶ್, ರವೀಂದ್ರ, ಸಜಿ, ಪ್ರಕಾಶ್, ದಯಾನಂದ, ಸಂಪತ್, ಸಂದೇಶ್, ಶನಂತ್ ಚಾಲಕರಾದ ಅರುಣ್, ಗಣೇಶ್, ಪ್ರವೀಣ್, ರಾಜು ಭಾಗವಹಿಸಿದ್ದರು.

ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ನಗದು ಬಹುಮಾನವನ್ನು ಘೋಷಿಸಿದ್ದಾರೆ.

'ಪತ್ತೆಗೆ ಸಹಕರಿಸಿ'
ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತು ಮಾರಾಟ ಜಾಲದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಿಸಿದ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲಿ ನೀಡುವಂತೆ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರು ಕೋರಿದ್ದಾರೆ.

ಇದಲ್ಲದೆ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿದ್ದು, ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು. ಹಾಗೂ ಸೂಕ್ತ ಬಹುಮಾವನ್ನು ನೀಡಲಾಗುವುದೆಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News