'ಡ್ರಗ್ಸ್ ದಂಧೆ'ಯಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು, ಸೆ. 5: 'ಮಾದಕ ದ್ರವ್ಯ(ಡ್ರಗ್ಸ್) ಜಾಲದ ಯಾವುದೇ ರೀತಿಯ ಒತ್ತಡ ಮತ್ತು ಪ್ರಭಾವಕ್ಕೆ ಮಣಿಯುವ ಪ್ರಶ್ನೆಯೆ ಇಲ್ಲ. ಈ ದಂಧೆಯಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾದಕ ದ್ರವ್ಯ ಜಾಲದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದು, ಪೊಲೀಸರ ಮೇಲೆ ಪ್ರಭಾವಿಗಳ ಒತ್ತಡವಿದೆ. ಆದರೆ, ಒತ್ತಡ ಹಾಕಿದ್ದಾರೆಂಬ ಬಗ್ಗೆ ಗೊತ್ತಿಲ್ಲ. ಏನೇ ಇದ್ದರೂ ಸರಕಾರ ಯಾವುದಕ್ಕೂ ಬಗ್ಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.
ಅಕ್ರಮ ಮಾದಕ ದ್ರವ್ಯ(ಡ್ರಗ್ಸ್) ಜಾಲದಲ್ಲಿ ಎಷ್ಟೇ ದೊಡ್ಡವರೇ ಭಾಗಿಯಾಗಿದ್ದರೂ ಅವರೆಲ್ಲರನ್ನು ಹೊರಗೆಳೆಯುತ್ತೇವೆ. ತನಿಖೆ ಯಾವುದೇ ಹಸ್ತಕ್ಷೇಪ, ಒತ್ತಡಗಳಿಲ್ಲದೆ ತನಿಖೆ ನಡೆದಿದೆ ಎಂದ ಅವರು, ಈ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾದ ವೀರೇನ್ ಖನ್ನಾನನ್ನು ದಿಲ್ಲಿಯಲ್ಲಿ ರಾಜ್ಯದ ಪೊಲೀಸರು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾದಕ ದ್ರವ್ಯ ಜಾಲದ ಮೂಲ ಹಿಂದಿರುವ ವ್ಯಕ್ತಿಗಳು ಯಾರು ಡ್ರಗ್ಸ್ ಮಾರಾಟ ದಂಧೆಯಲ್ಲಿದ್ದಾರೆ. ಯಾರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹೀಗೆ ವಿವಿಧ ಆಯಾಮದಿಂದಲೂ ತನಿಖೆ ನಡೆದಿದೆ ಎಂದ ಅವರು, ಡ್ರಗ್ಸ್ ನ್ನು ಹಲವು ಮಾರ್ಗಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಇದರ ಬಗ್ಗೆಯೂ ತನಿಖೆ ನಡೆದಿದೆ. ಗಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಚೆಕ್ ಪೋಸ್ಟ್ ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಅವರು ಹೇಳಿದರು.