ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ: 5ನೆ ಆರೋಪಿ ವಿದೇಶಿ ಪ್ರಜೆ ಬಂಧನ
ಬೆಂಗಳೂರು, ಸೆ.5: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಶನಿವಾರ ವಿದೇಶಿ ಪ್ರಜೆಯೋರ್ವನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಈತ ಐದನೇ ಆರೋಪಿಯಾಗಿದ್ದಾನೆ.
ಆಫ್ರಿಕಾ ದೇಶದ ಪ್ರಜೆ ಲೌಮ್ ಪೆಪ್ಪರ್ ಸಾಂಬಾ ಎಂಬಾತನನ್ನು ಬಂಧಿಸಲಾಗಿದ್ದು, ಈತ ಬಂಧಿತ ಆರೋಪಿ ರವಿಶಂಕರ್ ಹಾಗೂ ಕೆಲ ಸಿನಿ ತಾರೆಯರಿಗೆ ಮತ್ತು ಇತರರಿಗೆ ಡ್ರಗ್ ಪೂರೈಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.
ಈಗಾಗಲೇ ನಟಿ ರಾಗಿಣಿ, ಈಕೆಯ ಸ್ನೇಹಿತ ರವಿಶಂಕರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳು, ಡ್ರಗ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅದರ ಆಧಾರದಲ್ಲೇ ಹಲವರ ಬಂಧನಕ್ಕೆ ಸಿಸಿಬಿ ಬಲೆ ಬೀಸಿದೆ.
ರಾಗಿಣಿ 2ನೇ ಆರೋಪ: ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್‍ನಲ್ಲಿ ಉಲ್ಲೇಖಿತವಾದ 12 ಆರೋಪಿಗಳ ಹೆಸರು ಬಹಿರಂಗವಾಗಿದೆ.
ಪ್ರಕರಣದ ಮೊದಲನೇ ಆರೋಪಿ ಶಿವಪ್ರಕಾಶ್ ಚಪ್ಪಿ ಎಂಬಾತನಾಗಿದ್ದು, ಎರಡನೇ ಆರೋಪಿ ನಟಿ ರಾಗಿಣಿ ದ್ವಿವೇದಿ ಆಗಿದ್ದಾರೆ. ಅದೇ ರೀತಿ ವೀರೇನ್ ಖನ್ನಾ, ರಾಹುಲ್ ಹಾಗೂ ನಟಿಯ ಆಪ್ತ ರವಿಶಂಕರ್ ಹೆಸರುಗಳು ಸಹ ಎಫ್‍ಐಆರ್‍ನಲ್ಲಿ ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತೆ: ನಟಿ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇದ್ದು, ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸಾಂತ್ವನ ಕೇಂದ್ರದ ಪ್ರವೇಶ ದ್ವಾರದ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ಇದ್ದು, ಯಾರೂ ಜಮಾವಣೆಯಾಗದ ರೀತಿ ನೋಡಿಕೊಳ್ಳಲಾಗಿದೆ. ಇನ್ನು, ನಟಿ ಭೇಟಿಗೆ ಮುಂದಾದ ಪೋಷಕರಿಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಸಂಜನಾಗೆ ನೋಟಿಸ್ ಸಾಧ್ಯತೆ
ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ಬಂಧಿಸಿರುವ ಸಿಸಿಬಿ, ಸದ್ಯ ಸಂಜನಾಗೂ ಕೂಡ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಪಾರ ಮೌಲ್ಯದ ಮಾದಕವಸ್ತು ಜಪ್ತಿ
ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಯ ಬೆನ್ನಲ್ಲೇ ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿ ಆ್ಯಶಿಶ್ ಆಯಿಲ್ ಶೇಖರಿಸಿಟ್ಟು, ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ.
ಕೇರಳ ಮೂಲದ ವಿದ್ಯಾರ್ಥಿ ಸುಬ್ರಮಣಿ, ವಿದುಸ್, ಶೆಜಿನ್ ಬಂಧಿತರಾಗಿದ್ದು, ಸದ್ಯ ಬಂಧಿತರಿಂದ 2,161 ಗ್ರಾಂ ಆ್ಯಶಿಶ್ ಆಯಿಲ್, ಎರಡು ಕೆ.ಜಿ ಗಾಂಜಾ ಸೇರಿ 44 ಲಕ್ಷ ರೂ. ಬೆಲೆ ಬಾಳುವ ವಸ್ತು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಆರೋಪಿ ವಿದುಸ್ ಲಂಡನ್‍ನ ಬೆಡ್‍ಫೋರ್ಡ್‍ಶೈರ್‍ನಲ್ಲಿ ಎಂಎಸ್ಸಿ ವ್ಯಾಸಂಗ ಮಾಡಿ ಬಂದಿದ್ದು, ಇಲ್ಲಿನ ಬೆಂಗಳೂರಿನ ಕೆ.ಆರ್. ಪುರನಲ್ಲಿ ನೆಲೆಸಿ ಪ್ರತಿಷ್ಠಿತ ಕಾಲೇಜು ಸುತ್ತಮುತ್ತ ಆ್ಯಶಿಶ್ ಆಯಿಲ್ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
6ನೇ ಆರೋಪಿ ಆಳ್ವ ಪುತ್ರ
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್‍ನಲ್ಲಿ ಮಾಜಿ ಸಚಿವ ದಿ. ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಆರನೇ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓರ್ವ ಆರೋಪಿಗೆ ಕೊರೋನ
ಎಫ್‍ಐಆರ್‍ನಲ್ಲಿ ಐದನೇ ಆರೋಪಿಯಾಗಿರುವ ವೈಭವ್ ಜೈನ್ ಎಂಬಾತನಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಪುತ್ರಿ ಮೇಲಿನ ಆರೋಪ ಸುಳ್ಳು
ಪುತ್ರಿ ಮೇಲಿನ ಆರೋಪ ಸುಳ್ಳಾಗಿದ್ದು, ಇದರಿಂದ ಸಂಪೂರ್ಣವಾಗಿ ರಾಗಿಣಿ ಹೊರ ಬರುತ್ತಾರೆ. ಅಲ್ಲದೆ, ಆಕೆಯನ್ನು ಸಿಕ್ಕಿಸಲು ಸಂಚು ರೂಪಿಸಲಾಗುತ್ತಿದೆ.
-ರೋಹಿಣಿ ದ್ವಿವೇದಿ, ನಟಿ ರಾಗಿಣಿ ತಾಯಿ