ಸವರ್ಣೀಯರಿಂದ ಹಕ್ಕಿಪಿಕ್ಕಿ ಜನಾಂಗದವರ ಮೇಲೆ ಹಲ್ಲೆ: ಆರೋಪ

Update: 2020-09-05 15:18 GMT

ಬಾಗೇಪಲ್ಲಿ, ಸೆ.5: ತಾಲೂಕಿನ ಹೊರವಲಯದಲ್ಲಿ ವಾಸವಿದ್ದ ಹಕ್ಕಿಪಿಕ್ಕಿ ಜನಾಂಗದವರ ಜಾತಿ ನಿಂದನೆ ಮತ್ತು ಮಹಿಳೆಯರ ಮೇಲೆ ಪೊಲೀಸರ ಸಮ್ಮುಕದಲ್ಲೇ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಇತ್ತೀಚೆಗೆ ನಡೆದಿದೆ.

ಪಟ್ಟಣದಿಂದ ಸುಮಾರು ಒಂದು ಕಿಮೀ ದೂರವಿರುವ ಗೂಳೂರು ರಸ್ತೆಯ ಪಾತಬಾಗೇಪಲ್ಲಿ ರಘುರಾಮರೆಡ್ಡಿ ಅವರ ಜಮೀನು ಪಕ್ಕದ ಸರ್ವೇ ನಂ.4ರ ಸರಕಾರಿ ಜಮೀನಿನಲ್ಲಿ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ವಡಿಗಿರಿವಾರಪಲ್ಲಿ ಗ್ರಾಮದ ಅಂಜಿನಪ್ಪ ಎಂಬವರು ಐದು ವರ್ಷಗಳಿಂದ ತನ್ನ 4 ಹೆಂಡತಿಯರ ಜೊತೆ ವಾಸವಾಗಿದ್ದರು. ಸೆ.1ರಂದು ಬೆಳಗ್ಗೆ ಪಾತಬಾಗೇಪಲ್ಲಿ ಗ್ರಾಮದ ರಘುರಾಮರೆಡ್ಡಿ ಎಂಬವರು ಆಗಮಿಸಿ ‘ಇದು ನನ್ನ ಜಮೀನು, ಕೂಡಲೇ ನೀವು ಇಲ್ಲಿಂದ ಜಾಗ ಖಾಲಿ ಮಾಡಬೇಕು’ ಎಂದು ಮನೆಯಲ್ಲಿ ಇದ್ದ ಆಹಾರ ಸಾಮಾಗ್ರಿಗಳು ಮತ್ತು ವಸ್ತುಗಳನ್ನು ಹೊರಗೆ ಹಾಕಿದರು. ಅಂಜಿನಪ್ಪರ ಹೆಂಡತಿಯರಾದ ರತ್ನಮ್ಮ ಮತ್ತು ಲಕ್ಷ್ಮೀದೇವಮ್ಮ ಅವರನ್ನು ಎಳೆದಾಡಿ, ಕೀಳು ಜಾತಿಯವರು ಎಂದು ಜಾತಿ ನಿಂದನೆ ಮಾಡಿದ್ದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಂಜಿನಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಪೊಲೀಸರು ಆರೋಪಿಯ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿದ್ದಾರೆ. ಒಂದೇ ಕುಟುಂಬದ 8 ಜನರು ಬೀದಿಪಾಲಾಗಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಂಜಿನಪ್ಪ ಅವರು ದೂರು ನೀಡಿದ ಕೂಡಲೇ ರಘುರಾಮರೆಡ್ಡಿಯ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಲಾಗಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕಾನೂನನ್ನು ಯಾರು ಗೌರವಿಸುತ್ತಾರೋ ಅವರಿಗೆ ನಾವು ನ್ಯಾಯ ದೊರಕಿಸಲು ಸಿದ್ಧರಿರುತ್ತೇವೆ.
ನಯಾಜ್ ಬೇಗ್, ಆರಕ್ಷಕ ವೃತ್ತ ನಿರೀಕ್ಷಕ

ಸೆ.1ರಂದು ನಾನು ಕೂಲಿ ಕೆಲಸಕ್ಕೆ ಹೊರಗೆ ಹೋಗಿದ್ದೆ. ಪ್ರಭಾವಿ ಮುಖಂಡ ರಘುರಾಮರೆಡ್ಡಿ ನಮ್ಮ ಮನೆಗೆ ನುಗ್ಗಿ, ನನ್ನ ಹೆಂಡತಿಯರನ್ನು ಹಿಗ್ಗಾ ಮುಗ್ಗಾ ಬೈದು, ಜಾತಿ ನಿಂದನೆ ಮಾಡಿದ್ದಾನೆ. ನಮ್ಮ ಮನೆಯನ್ನು ಧ್ವಂಸ ಮಾಡುವ ಮೂಲಕ ನಮ್ಮನ್ನು ಬೀದಿ ಪಾಲು ಮಾಡಿದ್ದಾನೆ. ರಕ್ಷಣೆ ಮಾಡಬೇಕಾದ ಪೊಲೀಸರ ಎದುರಿನಲ್ಲೇ ಈ ಘಟನೆ ನಡೆದಿದ್ದು, ಯಾರೊಬ್ಬರೂ ರಕ್ಷಣೆಗೆ ಮುಂದಾಗಿಲ್ಲ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ದೂರುದಾರ ಅಂಜಿನಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News