ದೆವ್ವಗಳು ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ: ದೇವನೂರ ಮಹಾದೇವ

Update: 2020-09-05 15:52 GMT

ಮೈಸೂರು, ಸೆ.5: ದೇವರು ಏನೋ ಗೊತ್ತಿಲ್ಲ. ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದಾರ್ಥನಗರದಲ್ಲಿರುವ ಕನಕ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ವತಿಯಿಂದ ‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣ ನೀತಿಗಳು ಪರಿಣಾಮ ಮತ್ತು ಸವಾಲುಗಳು’ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೋನ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ’ ಎನ್ನುವ ಅರ್ಥ ಸಚಿವರನ್ನು ಭಾರತ ಪಡೆದಿದೆ. ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್‌ಟಿ ತಂದು ದೆವ್ವದ ಆಟ ಆಡಿದವರು ಯಾರು ಎಂದು ಪ್ರಶ್ನಿಸಿದರು.

ಜನರಿಗೆ ಕನಸು ಕಾಣಿಸಿ ನೋಟ್ ಬ್ಯಾನ್ ತಂದು ಭಾರತದ ಬದುಕನ್ನು ದುಃಸ್ವಪ್ನ ಮಾಡಿದ ಭೂತದ ಆಟ ಆಡಿವರು ಯಾರು ಎಂದು ಪ್ರಶ್ನಿಸಿದರು. ದೇವರು ಏನೊ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ ಎಂದರು.

ಯಾಕೆಂದರೆ ಕೊರೋನ ಭೀಕರ ವಾತಾವರಣದಲ್ಲಿ ಜನ ಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದನ್ನು ನೋಡುತ್ತಿದ್ದರೆ, The "most unkindest cut of all" ಎಂದೇ ಅನ್ನಿಸುತ್ತದೆ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ಜೂನ್ 2020 ರಂದು ಭೂಸುಧಾರಣೆ ಕಾಯ್ದೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಕೂಡ ರೈತರ ಏಳ್ಗೆಗಾಗಿ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿಯಾಗಿಸುತ್ತದೆ. ಇದರ ಮೂಲ ಹುಡುಕಿದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013 ರ ಭೂಸ್ವಾಧೀನ ಕಾಯ್ದೆಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 2015 ರಲ್ಲಿ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು ಎಂದು ಕಿಡಿಕಾರಿದರು.

ರೈತಾಪಿ ಹಿತ ಕಾಪಾಡುವ ದೇವರಾಜ್ ಅರಸು ಅವರ 1974ರ ಕಾಯ್ದೆಗಳನ್ನೆಲ್ಲಾ ನಿರ್ದಯವಾಗಿ ಈ ಸುಗ್ರೀವಾಜ್ಞೆ ಕತ್ತರಿಸಿ ಹಾಕಿದೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಮನಮುಟ್ಟುವಂತೆ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗಂಭೀರವಾದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಾಗೆ ಶಿವಸುಂದರ್ ಚಿಕಿತ್ಸಕ ನೋಟ ಬೀರಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಚಾಮರಸ ಮಾಲೀ ಪಾಟಿಲ್, ಆಲಗೂಡು ಶಿವಕುಮಾರ್, ಎನ್.ಮುನಿಸ್ವಾಮಿ, ಎನ್.ವೆಂಕಟೇಶ್, ಬೆಟ್ಟಯ್ಯಕೋಟೆ, ಚೋರನಹಳ್ಳೀ ಶಿವಣ್ಣ, ಕೆ.ವಿ.ದೇವೇಂದ್ರ, ಕಾರ್ಯ ಬಸವಣ್ಣ,ಕಲ್ಲಹಳ್ಳಿ ಕುಮಾರ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ವಕೀಲ ಪುನೀತ್, ಜನಾರ್ಧನ್‌ಜನ್ನಿ, ಟಿ.ಎನ್.ವೀರನಸಂಗಯ್ಯ, ಕುಮಾರ್, ಸಿದ್ದರಾಜು, ಕರುಣಾಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈ ಬಾರಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕರಿಸದಂತೆ ಸರಕಾರಕ್ಕೆ ಎಚ್ಚರಿಕೆ ನೀಡುವ ಅಗತ್ಯವಿದ್ದು, ರಾಜ್ಯದ ಎಲ್ಲ ರೈತ, ದಲಿತ, ಕಾರ್ಮಿಕ ಪರ ಸಂಘಟನೆಗಳೊಡಗೂಡಿ ಚರ್ಚಿಸಿ ಮುಂದಿನ ಹೋರಾಟ ಮತ್ತು ಈ ಮಸೂದೆ ತಡೆಯಲು ಬೇಕಾಗುವ ಎಲ್ಲ ಹಂತದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
-ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News