ಸಮಾನತೆ ಸಾಧಿಸುವ ಪ್ರಯತ್ನಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿವೆ: ಡಾ.ಬಂಜಗೆರೆ ಜಯಪ್ರಕಾಶ್

Update: 2020-09-05 16:36 GMT

ಮೈಸೂರು,ಸೆ.5: ಸಮಾಜದಲ್ಲಿ ಅಸಮಾನತೆ ಇರುವುದು ಎಲ್ಲರಿಗೂ ಗೊತ್ತೇ ಇದೆ. ಸಮಾನತೆ ಸಾಧಿಸುವ ಪ್ರಯತ್ನಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿವೆ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಕಿಡಿಕಾರಿದರು.

ನಗರದ ಸಿದ್ದಾರ್ಥನಗರದಲ್ಲಿರುವ ಕನಕ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಚನಚೇತನ ಟ್ರಸ್ಟ್ ವತಿಯಿಂದ “ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣ ನೀತಿಗಳು ಪರಿಣಾಮ ಮತ್ತು ಸವಾಲುಗಳು” ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಸಮಾನತೆ ವರ್ಸಸ್ ಖಾಸಗೀಕರಣ ಪರಿಣಾಮ ಮತ್ತು ಸವಾಲುಗಳ ಬಗ್ಗೆ ಮಾತನಾಡಿದರು.

ಸಮಾಜದಲ್ಲಿನ ಅಸಮಾನತೆ ಇರುವುದು ಎಲ್ಲರಿಗೂ ಗೊತ್ತೇ ಇದೆ. ಸಮಾನತೆ ಸಾಧಿಸುವ ಪ್ರಯತ್ನಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿವೆ. ನೇರವಾಗಿ ಮಾಡಿದರೆ ಸಾಮಾಜಿಕ ಸಂಘರ್ಷ ಏರ್ಪಡಬಹುದೆಂದು ಹಿಂಬಾಗಿಲಿನಿಂದ ಸಮಾನತೆಯನ್ನು ಕೊಂದು, ಮತ್ತೆ ಅಸಮಾನತೆಯನ್ನು ಜಾರಿಗೊಳಿಸುತ್ತಿವೆ. ಅದುವೇ ಖಾಸಗೀಕರಣ? ಎಂದು ಹೇಳಿದರು.

ಭೂಮಿಯು ಸಮುದಾಯದ ಆಸ್ತಿಯಾಗಿ ಸರ್ಕಾರದ ನಿಯಂತ್ರಣದಲ್ಲಿರಬೇಕಿತ್ತು. ಸಮುದಾಯ ಕೃಷಿ ನಡೆಯಬೇಕಿತ್ತು. ಹಾಗೆಯೇ, ದೊಡ್ಡ ಉದ್ದಿಮೆಗಳೆಲ್ಲಾ ಸರ್ಕಾರದ ಒಡೆತನದಲ್ಲಿರಬೇಕಿತ್ತು. ಸರ್ಕಾರವೇ ಮುಂದೆ ನಿಂತು ಮುಖ್ಯ ಉತ್ಪಾದನಾ ಕ್ಷೇತ್ರಗಳನ್ನು ಮುನ್ನಡೆಸುವುದು ಹಾಗೂ ಪ್ರಾತಿನಿಧ್ಯರಹಿತ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಕಾರ್ಯ ನಡೆಯಬೇಕಿತ್ತು? ಎಂದರು.

30 ವರ್ಷಗಳಿಂದ ದೇಶದ ಎಲ್ಲಾ ಪ್ರಮುಖ ಉತ್ಪಾದನಾ ರಂಗಗಳನ್ನು ಖಾಸಗಿಯವರ ಕೈಗೆ ವಹಿಸುತ್ತಾ ಬರಲಾಗಿದೆ. ಸಂವಿಧಾನದ ಮೀಸಲಾತಿ ನಿಯಮಗಳಾಗಲಿ, ಪ್ರಾತಿನಿಧ್ಯ ವಹಿಸುವ ನಿಯಮಗಳಾಗಲಿ ಯಾವುದೂ ಅನ್ವಯವಾಗದಂತೆ ಖಾಸಗಿಯವರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News