ಸಮಾಜಕ್ಕೆ ಶಿಕ್ಷಕರೆ ಮೇಲ್ಪಂಕ್ತಿಯಾಗಬೇಕು: ಎಸ್.ಸುರೇಶ್ ಕುಮಾರ್

Update: 2020-09-05 17:13 GMT

ಬೆಂಗಳೂರು, ಸೆ.5: ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕಾದಂತಹ ಜನರು ಇಂದು ಕಡಿಮೆಯಾಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಶಿಕ್ಷಕ ಸ್ಥಾನ ಅತ್ಯಂತ ಪವಿತ್ರವಾದ ಸ್ಥಾನವಾಗಿದ್ದು, ಸಮಾಜಕ್ಕೆ ಶಿಕ್ಷಕರೆ  ಮೇಲ್ಪಂಕ್ತಿಯಾಗಬೇಕು ಎಂದು ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶನಿವಾರ ಶಿಕ್ಷಕರ ಸದನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮೇಲ್ಪಂಕ್ತಿಯಾಗಬೇಕಲ್ಲದೆ ಸಮಾಜಕ್ಕೆ ಮೇಲ್ಪಂಕ್ತಿಯಾಗುವಂತಹ ಸಾಧಕರನ್ನು ಬೆಳೆಸಬೇಕು ಎಂದರು.

ಮೊದಲಿಗೆ ಹೋಲಿಸಿದರೆ ಇಂದು ಮಾದರಿ ಶಿಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಶಿಕ್ಷಕರು ಮಾದರಿಯಾಗುವುದರೊಂದಿಗೆ ಸಮಾಜಕ್ಕೆ ಮಾದರಿಯಾಗುವಂತಹ ವ್ಯಕ್ತಿಗಳನ್ನು ಬೆಳೆಸಬೇಕು. ನಾವಿಂದು ಸಮಾಜದಲ್ಲಿ ಯಾರನ್ನು ಸಾಧಕರೆಂದು ಕರೆಯುತ್ತೇವೆಯೊ ಅವರೆಲ್ಲರ ಹಿಂದೆ ಪ್ರೇರಣೆ ಮತ್ತು ಪ್ರೇರಕ ಶಕ್ತಿಯಿದೆ. ಈ ರೀತಿಯ ಪ್ರೇರಕ ಶಕ್ತಿಯನ್ನೆ ಅವರು ಮೇಲ್ಪಂಕ್ತಿ ಎಂದು ತಿಳಿದುಕೊಂಡು ತಾವೂ ಅವರಂತಾಗಬೇಕು ಎಂದು ಕೆಲಸ ಮಾಡುತ್ತಾ ಸಾಧಕರಾಗಿದ್ದಾರೆ. ನಾವು ಮಕ್ಕಳ ಮುಂದೆ ಮೇಲ್ಪಂಕ್ತಿಯಲ್ಲಿರುವ ಹೆಚ್ಚೆಚ್ಚು  ಉದಾಹರಣೆಗಳನ್ನು ಇಡಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಸಾಹಿತಿ ಡಾ.ಹಾ.ಮಾ.ನಾಯಕರ ಅಂಕಣ ಬರಹವೊಂದನ್ನು ಪ್ರಸ್ತಾಪಿಸಿದ ಸುರೇಶ್ ಕುಮಾರ್, ‘ಒಬ್ಬ ವೃದ್ಧೆ ಬಂದು, ನಾವೆಲ್ಲ ಚಿಕ್ಕಮಕ್ಕಳಿದ್ದಾಗ ನಮ್ಮ ಕಣ್ಣಮುಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಓಡಾಡುತ್ತಿದ್ದರು. ಅವರನ್ನು ನೋಡಿದಾಗ ನಾವು ಇವರಂತಾಗಬೇಕು  ಎಂದೆನಿಸುತ್ತಿತ್ತು. ಈಗ ನನ್ನ ಮೊಮ್ಮಗನಿಗೆ ಇವರ ರೀತಿ ಆಗು ಎಂದು ಯಾರನ್ನು ತೋರಿಸಲಿ’ ಎಂದು ಕೇಳಿದಳಂತೆ. ‘ಆ ವೃದ್ಧೆಯ ಅಳಲು ಸಮಾಜದ ಅಳಲು, ಸಮಾಜದ ಎಲ್ಲ ಕ್ಷೇತ್ರಗಳ ಅಳಲಾಗಿದೆ’ ಎಂದು ಹಾಮಾ ನಾಯಕರು ತಮ್ಮ ಅಂಕಣದಲ್ಲಿ ಬರೆದಿದ್ದರು ಎಂದು ಹೇಳಿದರು.

ಶಿಕ್ಷಕರ ಪಾತ್ರ ಸಮಾಜದಲ್ಲಿ ಎಲ್ಲರಿಗಿಂತ ಹಿರಿದಾದುದು. ನಿಜವಾಗಿಯೂ ಸಮಾಜ ಹಾಗೂ ರಾಷ್ಟ್ರ ನಿರ್ಮಾಪಕರು ಶಿಕ್ಷಕರೇ. ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗ ಪಥಿಕರು. ಶಿಕ್ಷಕರೇ ಎಲ್ಲರಿಗೂ ಮಾರ್ಗದರ್ಶಕರು. ಹಾಗಾಗಿಯೇ ಶಿಕ್ಷಕರು ಮಾದರಿಯಾಗುವಂತೆ ಕರ್ತವ್ಯ ನಿರ್ವಹಿಸಿ, ಸಮಾಜಕ್ಕೆ ಮಾದರಿಯಾಗುವಂತಹ ಸಾಧಕರನ್ನು ನೀಡಬೇಕಾದ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಅವರು ಹೇಳಿದರು.

ಕೋವಿಡ್ ನಂತಹ ವಿಷಮ ಸಂದರ್ಭದಲ್ಲಿ ನಮ್ಮ ಶಿಕ್ಷಕ ಸಮುದಾಯ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ  ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ಶಿಕ್ಷಕರ ಈ ಕೊರೋನ ವಾರಿಯರ್ಸ್ ಸೇವೆಯು ಸಮಾಜ ಎಂದೂ ಮರೆಯದಂತಹುದಾಗಿದೆ ಎಂದು ಸುರೇಶ್ ಕುಮಾರ್ ಶ್ಲಾಘಿಸಿದರು.

ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೂವರು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಅವರು, ರಾಜ್ಯದ ಶಿಕ್ಷಕ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದರು. ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜೆ.ಜಗದೀಶ್, ಸರ್ವ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News