ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ: ನಟಿ ಶರ್ಮಿಳಾ
ಬೆಂಗಳೂರು, ಸೆ.5: ನನ್ನ ಮೌನ ಎಲ್ಲರನ್ನೂ ಏನೇನೋ ಕಲ್ಪಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತಿದೆ ಎಂದರೆ, ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ. ನನ್ನ ಮೇಲೆ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ನಟಿ ಶರ್ಮಿಳಾ ಮಾಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅನವಶ್ಯಕವಾಗಿ ತಮ್ಮ ವಿರುದ್ಧ ಸುಳ್ಳುಸುದ್ದಿಗಳನ್ನು ಹರಡಿದರೆ, ತಾವು ಸುಮ್ಮನಿರುವುದಿಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಶರ್ಮಿಳಾ ಗುರುವಾರವಷ್ಟೇ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕೊರೋನ ಪಾಸಿಟಿವ್ ಇದೆ ಮತ್ತು ತಾವೆಲ್ಲಾ ಕ್ವಾರಂಟೈನ್‍ನಲ್ಲಿ ಇರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಕೆಲವು ತಿಂಗಳುಗಳ ಹಿಂದೆ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾದ ಸಂದರ್ಭದಲ್ಲಿ, ಅವರ ಜತೆಗೆ ಡ್ರಗ್‍ಪೆಡ್ಲರ್ ಒಬ್ಬ ಇದ್ದ ಎಂಬ ಆರೋಪ ಕೇಳಿ ಬಂದಿತ್ತು. ಶರ್ಮಿಳಾ ಮಾಂಡ್ರೆ ಅವರ ಆಪ್ತ ಎನ್ನಲಾದ ಕಾರ್ತಿಕ್ ಎನ್ನುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.