ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಪೌಷ್ಟಿಕ ತೋಟ ನಿರ್ಮಾಣಕ್ಕೆ ಸಹಾಯಧನ: ಸಚಿವ ಸಿ.ಟಿ. ರವಿ

Update: 2020-09-05 18:07 GMT

ಚಿಕ್ಕಮಗಳೂರೂ, ಸೆ.5: ಜಿಲ್ಲೆಯ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಚ್ಚಲು ಗುಂಡಿ ಹಾಗೂ ಪೌಷ್ಠಿಕ ಕೃಷಿ ತೋಟಗಳ ನಿರ್ಮಾಣಕ್ಕೆ ಸಹಾಯ ಧನ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದರು.

ತಾಲೂಕಿನ ಅಲ್ಲಂಪುರ ಗ್ರಾಮದ ಶಾಲಾ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂ, ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಇಂಗು ಗುಂಡಿ ಹಾಗೂ ಪೌಷ್ಟಿಕ ಕೃಷಿ ತೋಟ ನಿರ್ಮಾಣದ ಕಾಮಗಾರಿ ಅಭಿಯಾನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನತೆ ಸ್ವಸ್ಥ ಸಮಾಜ ಹೊಂದಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಮೋದಿ ಅವರು ಆತ್ಮ ನಿರ್ಭರ ಯೋಜನೆ ಜಾರಿಗೊಳಿಸಿದ್ದಾರೆ. ಅದರಂತೆ ಸದ್ಯ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಡಿ ಇಂಗುಗುಂಡಿಗಳ ನಿರ್ಮಾಣ ಹಾಗೂ ಪೌಷ್ಟಿಕ ಆಹಾರದ ಕೈತೋಟ ನಿರ್ಮಾಣಕ್ಕೆ ಸಹಾಯಧನ ಒದಗಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ಪ್ರಚಾರ  ಮಾಡಬೇಕೆಂದರು.

ಮನೆಯ ನೀರನ್ನು ರಸ್ತೆ ಅಥವಾ ಮನೆಯ ಸುತ್ತ-ಮುತ್ತ ಹರಿಯಲು ಬಿಡುವುದರ ಬದಲಾಗಿ ತಮ್ಮ ಮನೆಯಲ್ಲೇ ಬಚ್ಚಲು ಗುಂಡಿ ನಿರ್ಮಿಸಿಕೊಂಡಲ್ಲಿ ಇದರ ನಿರ್ಮಾಣ ವೆಚ್ಚಕ್ಕಾಗಿ ಸರಕಾರ ವತಿಯಿಂದ ಪ್ರತೀ ಫಲಾನುಭವಿಗೆ 17 ಸಾವಿರ ರೂ. ಹಣ ನೀಡುತ್ತಿದೆ. ಪ್ರತಿಯೊಬ್ಬರು ಬಚ್ಚಲು ಗುಂಡಿ ನಿರ್ಮಾಣ ಮಾಡುವುದರಿಂದ ಜಲ ಮರುಪೂರಣಗೊಳ್ಳಲಿದೆ. ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆ, ನೊಣಗಳು ಬಾರದಂತೆ ಸದಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಪೌಷ್ಟಿಕ ಕೃಷಿ ಕೈತೋಟ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಅಥವಾ ಶಾಲೆಗಳಲ್ಲಿ ಸಾಮುದಾಯಿಕವಾಗಿ ನಿರ್ಮಿಸಿದ್ದಲ್ಲಿ 37,391 ಹಾಗೂ ಒಂದು ಗುಂಟೆ ಜಾಗದಲ್ಲಿ ವೈಯಕ್ತಿಕವಾಗಿ ಪೌಷ್ಟಿಕ ಕೃಷಿ ತೋಟ ನಿರ್ಮಿಸಿದ್ದಲ್ಲಿ 2397 ಹಣ ನೀಡಲಾಗುವುದು ಎಂದ ಅವರು, ಜನತೆ ತರಕಾರಿ ಬೆಳೆಗಳನ್ನು ಕೊಳ್ಳುವ ಬದಲಾಗಿ ಬೆಳೆಯುವ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ಸ್ವಾವಲಂಬಿಯಾಗಲು ಸಾಧ್ಯ. ಅಲ್ಲದೇ ಶಾಲಾ ಅಥವಾ ಅಂಗನವಾಡಿ ವನಗಳಲ್ಲಿ ಪೌಷ್ಟಿಕ ಹಾಗೂ ಸಾವಯವ ತರಕಾರಿ ಬೆಳೆಯುವುದರಿಂದ ಮಕ್ಕಳ ಆರೋಗ್ಯಕ್ಕೂ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಯಾವುದೇ ಶಾಲೆಗಳು ಅಥವಾ ಅಂಗನವಾಡಿಗಳು ನರೇಗಾ ಯೋಜನೆಯಡಿಯಲ್ಲಿ ಶಾಲಾ ಕೃಷಿ ಕೈ ತೋಟವನ್ನು ನಿರ್ವಹಣೆ ಮಾಡಿದ್ದಲ್ಲಿ ಅಂತಹವುಗಳನ್ನು ಗುರುತಿಸಿ ಸೂಕ್ತ ಬಹುಮಾನ ನೀಡಲಾಗುವುದು. ಅಲ್ಲದೇ ಉತ್ತಮ ಪೌಷ್ಟಿಕ ತರಕಾರಿಗಳನ್ನು ಸಾವಯವವಾಗಿ ಬೆಳೆಯುವುದರಿಂದ ಮಕ್ಕಳಲ್ಲಿ ಆರೋಗ್ಯ ಹಾಗೂ ಕೃಷಿಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಂತಾಗುವುದು ಎಂದರು.  

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲೂ ನರೇಗಾ ಯೋಜನೆಯಡಿ ಇಂಗು ಗುಂಡಿ ನಿರ್ಮಾಣ ಹಾಗೂ ಪೌಷ್ಟಿಕ ತೋಟ ನಿರ್ಮಿಸಲು ಇಂದಿನಿಂದ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲಿ 50ರಂತೆ ಬಚ್ಚಲುಗುಂಡಿ ಹಾಗೂ 10ರಂತೆ ಪೌಷ್ಟಿಕ ತೋಟ ನಿರ್ಮಿಸಬಹುದಾಗಿದೆ. ಬೇಡಿಕೆ ಆಧಾರಿತವಾಗಿ ಅಣಬೆ ಬೇಸಾಯವನ್ನು ಕೈಗೊಳ್ಳಬಹುದಾಗಿದೆ ಇದರಿಂದಾಗಿ ಸರಕಾರದ ವತಿಯಿಂದ ಸೂಕ್ತ ಸಹಾಯಧನ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಪಂ ಸದಸ್ಯೆ ಜಸಿಂತಾ ಅನಿಲ್‍ಕುಮಾರ್, ಸಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್, ತಾಪಂ ಸದಸ್ಯರಾದ ವೈ.ಜಿ ಸುರೇಶ್,  ಜಯಣ್ಣ, ದ್ರಾಕ್ಷಾಯಿಣಿ ಸುರೇಶ್. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ತಾಪಂ ಇಒ ಎಚ್.ಡಿ.ರೇವಣ್ಣ ಹಾಗೂ ಗ್ರಾಪಂ ಪಿಡಿಒ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News