ಪ್ರತಿಮೆ ಸ್ಥಾಪನೆಯಿಂದ ಸಂಚಾರಕ್ಕೆ ಅಡ್ಡಿ: ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.6: ಯಶವಂತಪುರ ವ್ಯಾಪ್ತಿಯ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಜಂಕ್ಷನ್‍ನಲ್ಲಿ ಬಿಬಿಎಂಪಿ ಪ್ರತಿಷ್ಠಾಪಿಸಿರುವ ಪ್ರತಿಮೆಗಳಿಂದ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರು ಆದ ವಕೀಲ ಎ.ವಿ.ಅಮರನಾಥನ್ ಅವರು ವಾದಿಸಿ, ಜಗಜ್ಯೋತಿ ಬಸವೇಶ್ವರ, ಶಿವಕುಮಾರಸ್ವಾಮೀಜಿ ಮತ್ತು ರಾಜ್‍ಕುಮಾರ್ ಅವರ ಪ್ರತಿಮೆಗಳನ್ನು ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಜಂಕ್ಷನ್‍ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಹೆದ್ದಾರಿ ನಿಯಮಗಳ ಉಲ್ಲಂಘನೆ ಮತ್ತು ಸಂಚಾರ ದಟ್ಟಣೆಗೆ ಕಾರಣವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿರುವ ಸ್ಥಳ ಪಾರ್ಕ್‍ಗೆ ಸೇರಿದ್ದು ಎನ್ನುವುದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಸಂಚಾರ ದಟ್ಟಣೆಗೆ ಕಾರಣವಾಗಲಿದೆಯೇ ಎಂಬುದನ್ನಷ್ಟೇ ಪರಿಶೀಲನೆ ನಡೆಸಬೇಕಿದೆ ಎಂದು ಪೀಠ ಹೇಳಿತು. ಸರಕಾರ ನೇಮಿಸುವ ಅಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಫಿಡವಿಡ್ ಸಲ್ಲಿಸಬೇಕೆಂದು ಸೂಚನೆ ನೀಡಿತು.