ಚಿಕ್ಕಮಗಳೂರು: ಕೇಂದ್ರ ಹಣಕಾಸು ಸಚಿವೆಯ ವೀಡಿಯೋ ಕಾನ್ಫರೆನ್ಸ್ ಹಾಸ್ಯಾಸದ; ಜೆಡಿಎಸ್ ಜಿಲ್ಲಾ ವಕ್ತಾರ ಗಿರೀಶ್

Update: 2020-09-06 12:51 GMT

ಚಿಕ್ಕಮಗಳೂರು, ಸೆ.6: ಕಾಫಿ ಬೆಳೆಗಾರರ ಸಂಘಟನೆಗಳು ಸಾಕಷ್ಟು ಬಾರಿ ಬೆಂಗಳೂರು ಸೇರಿದಂತೆ ದಿಲ್ಲಿಗೆ ಹೋಗಿ ಮನವಿ ನೀಡಿದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿರಲಿಲ್ಲ. ಆದರೆ ಸಿ.ಟಿ.ರವಿ ಮಧ್ಯಸ್ಥಿಕೆಯಲ್ಲಿ ಕೇಂದ್ರ ವಿತ್ತ ಸಚಿವೆ ಬೆಳೆಗಾರರೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಇದು ಬೆಳೆಗಾರರ ಕಣ್ಣೊರೆಸುವ ತಂತ್ರವಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದಾಗಲೇ ಕೇಂದ್ರ ರಾಜ್ಯ ಸರಕಾರಗಳು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈಗ ಕೇಂದ್ರದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರು ಭರವಸೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಾಗಿದ್ದು, ಬೆಳೆಗಾರರು ತೀವ್ರ ಸಮಸ್ಯೆಯಲ್ಲಿದ್ದಾರೆ. ಕಾಫಿ, ಕಾಳು ಮೆಣಸು ಬೆಳೆ ಕೆಲ ವರ್ಷಗಳಿಂದ ಬೆಳೆಗಾರರಿಗೆ ಸಿಗದೇ ಮಣ್ಣುಪಾಲಾಗಿವೆ. ಈ ಬೆಳೆಗಳಿಗೆ ಸೂಕ್ತ ಬೆಲೆಯೂ ಇಲ್ಲದೇ ಕಾಫಿ ಉದ್ಯಮವೇ ನಾಶವಾಗುವ ಭೀತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರ ನಿಯೋಗ ಕೆಲವರ್ಷಗಳಿಂದ ಕೇಂದ್ರದ ಬಾಗಿಲು ತಟ್ಟುತ್ತಲೇ ಇದ್ದು, ಪರಿಹಾರಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಕೇಂದ್ರ, ರಾಜ್ಯ ಸರಕಾರಗಳು ಇದುವರೆಗೂ ಬೆಳೆಗಾರರ ನೆರವಿಗೆ ಬಂದಿಲ್ಲ. ನಯಾ ಪೈಸೆಯ ಪರಿಹಾರವನ್ನೂ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಗದ್ದಗೆಯಲ್ಲಿರುವ ಬಿಜೆಪಿ ಸರಕಾರಗಳಿಗೆ ಇತ್ತೀಚೆಗೆ ಕಾಫಿ ಬೆಳೆಗಾರರ ಮೇಲೆ ದಿಢೀರ್ ಪ್ರೀತಿ ಬಂದಂತಿದೆ. ಈಗ ದಿಢೀರನೆ ಬೆಳೆಗಾರರೊಂದಿಗೆ ಕೇಂದ್ರ ಹಣಕಾಸು ಸಚಿವೆ ಬೆಳೆಗಾರರೊಂದಿಗೆ ವಿಡಿಯೋ ಸಂವಾದ ನಡೆಸಿರುವುದು ಹಾಸ್ಯಾಸ್ಪದವು, ನಾಟಕವೂ ಆಗಿದೆ ಎಂದು ಟೀಕಿಸಿರುವ ಗಿರೀಶ್, ಕಾಫಿ ಮಂಡಳಿ ಅಧ್ಯಕ್ಷರು ನಮ್ಮ ಜಿಲ್ಲೆಯವರಾಗಿದ್ದಾರೆ. ಅವರು ಸ್ವತಃ ಕಾಫಿ ಬೆಳೆಗಾರರಾಗಿದ್ದಾರೆ. ಬೆಳೆಗಾರರ ಸಮಸ್ಯೆ ಬಗ್ಗೆ ಬಹಳಷ್ಟು ಸಮಸ್ಯೆಗಳನ್ನು ಅರಿತಿದ್ದಾರೆ. ಎಂ.ಎಸ್.ಭೋಜೇಗೌಡರು ಅಧ್ಯಕ್ಷರಾಗಿರುವುದು ಕೇವಲ ಆ ಹುದ್ದೆಗೆ ಮಾತ್ರ ಎಂಬುದನ್ನು ಬಿಜೆಪಿ ಈ ಇಂದೆಯೇ ಸಾಭೀತು  ಮಾಡಿದೆ. ಹಿಂದೆ ಕಾಫಿ ಭೋರ್ಡ್ ಅಧ್ಯಕ್ಷರಿಗೆ ಬಹಳಷ್ಟು ಅಧಿಕಾರವಿತ್ತು. ಅದನ್ನೆಲ್ಲ ಈಗ ಬದಿಗೆ ಸರಿಸಿರುವ ಬಿಜೆಪಿ ಸರಕಾರ ಕಾಫಿ ಮಂಡಳಿಗೆ ನಾಮಾಕಾವಸ್ತೆಗೆಂಬಂತೆ ಅಧ್ಯಕ್ಷರನ್ನು ನೇಮಕ ಮಾಡಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಯಾವುದೇ ಪ್ರಯೋಜನವೂ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಾಫಿ ಬೆಳೆಗಾರರೊಂದಿಗೆ ನಡೆದ ಸಂವಾದದಲ್ಲಿ ಬೆಳೆವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಚಿವರಿಗೆ ತಿಳಿದಿದಿಯೋ ಇಲ್ಲವೊ, ಈ ವಿಮಾ ಸೌಲಭ್ಯಗಳು ಕೇಂದ್ರದಲ್ಲಿ ಯಾವುದೆ ಸರಕಾರವಿದ್ದ ಸಂದರ್ಭದಲ್ಲಿ ನಿರಂತರವಾಗಿ ಮುಂದುವರಿಯುತ್ತಾ ಬಂದಿದೆ. ಸಚಿವರು ಹೇಳಿಕೆ ನೀಡಿರುವ ಯೋಜನೆಗಳ ಪೈಕಿ ಯಾವುದರಲ್ಲೂ ಹೊಸತನವಿಲ್ಲ. ಇವೆಲ್ಲಾ ರಾಜಕೀಯ ಪ್ರೇರಿತವಾದ ಕಾರ್ಯಕ್ರಮಗಳಾಗಿವೆ. ಇಂತಹ ಕಾರ್ಯಕ್ರಮಗಳಿಂದ ಕಾಫಿ ಬೆಳೆಗಾರರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಅವರು, ಕೇಂದ್ರಕ್ಕೆ ನಿಜವಾಗಿಯೂ ಕಾಫಿ ಬೆಳೆಗಾರರ ಬಗ್ಗೆ ಕಾಳಜಿ ಇದ್ದಲ್ಲಿ ಕಾಫಿ ಉದ್ಯಮದ ಉಳಿಗೆ ಶೀಘ್ರ ಪರಿಹಾರದ ಪ್ಯಾಕೆಜ್ ಘೋಷಣೆ ಮಾಡಲಿ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಕಾಫಿ, ಅಡಿಕೆ, ತೆಂಗು ಹಾಗೂ ತರಕಾರಿ ಬೆಳೆಗಳು ಕೊಳೆತು ಸರ್ವನಾಶವಾಗಿವೆ. ರೈತರು ಹಾಗೂ ಬೆಳೆಗಾರರ ಪರಿಸ್ಥಿತಿ ಹೇಳ ತೀರದಾಗಿದೆ. ಬಿಜೆಪಿ ಸರಕಾರಕ್ಕೆ ಮತ್ತು ರಾಜ್ಯದ ಸಚಿವರುಗಳಿಗೆ ಇಲ್ಲಿನ ರೈತರ ಬಗ್ಗೆ ಕಿಂಚಿತ್ತಾದರೂ ಕನಿಕರ ಇದ್ದರೆ ಸಂಪೂರ್ಣ ಸಾಲ ಮನ್ನಾ ಮಾಡಲಿ ಆಗ ಇಂತಹ ವೀಡಿಯೋ ಕಾನ್ಫರೆನ್ಸ್‍ಗಳನ್ನು ಎಲ್ಲರೂ ಸ್ವಾಗತಿಸಿ ಕೊಂಡಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News