ಡ್ರಗ್ಸ್ ಖರೀದಿಸುವವರು ಸಮಾಜ ದ್ರೋಹಿಗಳು: ನಳಿನ್‍ ಕುಮಾರ್ ಕಟೀಲ್

Update: 2020-09-06 16:18 GMT

ಬೆಂಗಳೂರು, ಸೆ. 6: `ಡ್ರಗ್ಸ್ ಖರೀದಿಸಯವವರು, ಮಾರಾಟ ಮಾಡುವವರು, ಪೂರೈಕೆ ಮಾಡುವವರು ಸಮಾಜ ದ್ರೋಹಿಗಳು. ಅಂತವರು ಯುವ ಜನಾಂಗದ ಭವಿಷ್ಯದ ಹಾದಿಗೆ ಮುಳ್ಳುಗಳಿದ್ದಂತೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಸರಣಿ ಮಾಡಿರುವ ಅವರು, `ರಾಜ್ಯ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ದ ಸಮರ ಸಾರಿದ್ದು, ಜನತೆಯಲ್ಲಿ ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ. ಆ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಜತೆಯಾಗಿ. ನಿಮಗೆ ಏನೂ ತೊಂದರೆ ಆಗದಂತೆ ಬಿಜೆಪಿ ನೋಡಿಕೊಳ್ಳಲಿದೆ' ಎಂದು ಭರವಸೆ ನೀಡಿದ್ದಾರೆ.

`ಡ್ರಗ್ಸ್ ಜಾಲವನ್ನು ಬೇಧಿಸಲು ಪೊಲೀಸ್ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಸ್ವಾತಂತ್ರ್ಯ ನೀಡಿರುವುದು ನಮ್ಮ ಪಕ್ಷವಾಗಿದೆ. ಆ ಮೂಲಕ ಲಕ್ಷಾಂತರ ತಾಯಂದಿರ, ಸಹೋದರಿಯರ ಜತೆ ನಮ್ಮ ಸರಕಾರ ಇದೆ. ಇದು ಅಪರಾಧ ಜಗತ್ತಿನ ವಿರುದ್ದ ನಮ್ಮ ಹೋರಾಟವಾಗಿದೆ' ಎಂದು ಅವರು ಹೇಳಿದ್ದಾರೆ.

`ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುಕ ತಂದಿದ್ದಾರೆ. ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ದ ಸಮರ ಸಾರಿದೆ' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News