×
Ad

ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ವಿಳಂಬ ಮಾಡಿದರೆ ತಕ್ಕಪಾಠ: ಪ್ರಸನ್ನಾನಂದ ಸ್ವಾಮೀಜಿ

Update: 2020-09-06 22:11 IST

ಹರಿಹರ, ಸೆ.6: ವಾಲ್ಮೀಕಿ ಸಮುದಾಯದ ಪ್ರಮುಖ ಬೇಡಿಕೆಯಾದ ಎಸ್ಟಿ(ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆಂದು ರಾಹನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು ಜತೆಗೆ ಮೀಲಲಾತಿಯ ಬಗ್ಗೆ ರಾಜನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೆ.21ಕ್ಕೆ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ನಮ್ಮ ಬೇಡಿಕೆಗಳನ್ನು ಬಗೆ ಹರಿಸಿದರೆ ಅಭಿನಂದಿಸುತ್ತೇವೆ. ಇಲ್ಲದಿದರೆ, ತಕ್ಕ ಪಾಠ ಕಲಿಸಲಾಗುವುದೆಂದರು.

ಎಸ್ಟಿ ಸಮುದಾಯ ಮೀಸಲಾತಿ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರೂ ಮೀಸಲಾತಿ ಹೆಚ್ಚಿಸಿಲ್ಲ. ಆದರೆ, ಯಾವುದೇ ಹೋರಾಟ ಮಾಡದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದೆ. ಹೀಗಾಗಿ ವಾಲ್ಮೀಕಿ ಸಮುದಾಯದ ಶಾಸಕರು ಪಕ್ಷಭೇದ ಮರೆತು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಅವರು ಕರೆ ನೀಡಿದರು.

ಶ್ರೀರಾಮಲು ನೇತೃತ್ವದಲ್ಲಿ ಹೋರಾಟ: ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಎಚ್ಚರಿಕೆ ನೀಡಲು ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಶಾಸಕರು ರಾಜೀನಾಮೆ ನೀಡಲು ಸಿದ್ದರೆಂದು ಸಭೆಯಲ್ಲಿದ್ದ ಶಾಸಕರು ಹೇಳಿದರು. ಇದಕ್ಕೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ರಾಜೀನಾಮೆ ನೀಡುವುದು ಪರಿಹಾರವಲ್ಲ. ಅಧಿಕಾರದಲ್ಲಿದ್ದೇ ಹೋರಾಟ ಮಾಡಬೇಕಿದೆ. ಶ್ರೀರಾಮುಲು ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳೋಣವೆಂದರು.

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದರೆ 24ಗಂಟೆಯಲ್ಲಿ ಶೇ.7.5ರಷ್ಟು ಮೀಸಲು ಅನುಷ್ಟಾನಗೊಳಿಸಲು ಪ್ರಯತ್ನಿಸುತ್ತೇನೆಂದು ಹೇಳಿದ್ದೆ. ಆ ಮಾತಿಗೆ ನಾನು ಈಗಲು ಬದ್ದನಾಗಿದ್ದೇನೆಂದು ತಿಳಿಸಿದರು. ಈ ವೇಳೆ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಗಣೇಶ್, ಇ.ತುಕಾರಂ, ರಘುಮೂರ್ತಿ, ಅನಿಲ್ ಚಿಕ್ಕಮಾದು, ಪ್ರತಾಪ್‍ಗೌಡ, ಸಂಸದ ದೇವೇಂದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News