ಚಿಕ್ಕಮಗಳೂರು: ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ; ನಗರಸಭೆ ಆಯುಕ್ತ ಬಸವರಾಜ್

Update: 2020-09-06 17:19 GMT

ಚಿಕ್ಕಮಗಳೂರು, ಸೆ.6: ನಗರದಲ್ಲಿ ಕಸಸಂಗ್ರಹಣೆಯ ಕೆಲಸವನ್ನು ಗುತ್ತಿಗೆದಾರರು ಉತ್ತಮವಾಗಿ ನಿರ್ವಹಿಸುತ್ತಿದ್ದು, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುವಂತಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಕಸಸಂಗ್ರಹದ ವಾಹನಗಳಿಗೆ ಕಸವನ್ನು ನೀಡದೇ ಎಲ್ಲೆಂದರಲ್ಲಿ ಎಸೆಯುತ್ತಿರುವವರ ವಿರುದ್ಧ ದಂಢ ವಿಧಿಸಲಾಗುವುದು. ಇದಕ್ಕೂ ಬಗ್ಗದಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜ್ ಹೇಳಿದರು.

ರವಿವಾರ ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭೆ ಕಸ ಸಂಗ್ರಹಣೆ ಕುರಿತ ಸಿಬ್ಬಂದಿ ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಕಸ ಸಂಗ್ರಹಣೆಯ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ನಗರಸಭೆಯಿಂದ ಈ ಸಂಸ್ಥೆಗೆ 22 ಕಸ ಸಂಗ್ರಹಣೆಯ ಆಟೊಗಳನ್ನು ಮತ್ತು ಎರಡು ಟ್ಯ್ರಾಕ್ಟರ್‍ಗಳನ್ನು ನಗರಸಭೆಯಿಂದ ನೀಡಲಾಗಿದೆ. ಗುತ್ತಿಗೆದಾರರಲ್ಲಿ ಒಂದು ಟ್ಯ್ರಾಕ್ಟರ್ ಇದ್ದು, 28 ಜನ ಡ್ರೈವರ್, 5ಜನ ಮೇಲ್ವಿಚಾರಕರೂ ಸೇರಿದಂತೆ 70 ಜನರು ಕಸ ಸಂಗ್ರಹಣೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಸಸಂಗ್ರಹಣೆ ಕೆಲಸ ನಗರದಲ್ಲಿ ಉತ್ತಮವಾಗಿ ನಿರ್ವಹಣೆಯಾಗುತ್ತಿದೆಯಾದರೂ ಕೆಲ ಲೋಪದೋಷಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಇದನ್ನು ಸಂಸ್ಥೆ ಸಮರ್ಪಕವಾಗಿ ನಿರ್ವಹಿಸಬೇಕು. ನಗರಸಭೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯದಲ್ಲಿಯೇ ಮಾದರಿ ನಗರಸಭೆಯನ್ನಾಗಿಸಲು ಶ್ರಮಿಸಬೇಕೆಂದರು.

ನಗರಸಭೆ ಸಿಬ್ಬಂದಿ ಸಮರ್ಪಕವಾಗಿ ಕಸ ಸಂಗ್ರಹಣೆ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಕೆಲವು ವಾರ್ಡ್‍ಗಳಲ್ಲಿ ಸಮಸ್ಯೆಗಳಿವೆ. ಕೆಲ ವಾರ್ಡ್‍ಗಳಲ್ಲಿ ಸಾರ್ವಜನಿಕರು ಕಸವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆಯುತ್ತಿದ್ದಾರೆ. ಅದನ್ನು ನಿಯಂತ್ರಿಸಲು ನಗರಸಭೆ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಸಾರ್ವಜನಿಕರ ಮನವೊಲಿಸಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ನಗರಸಭೆ ವಾಹನಕ್ಕೆ ಕಸ ನೀಡುವಂತೆ ಮನವರಿಕೆ ಮಾಡಿಕೊಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಕಸಸಂಗ್ರಹದ ಸಿಬ್ಬಂದಿ, ಸಾರ್ವಜನಿಕರು ಕಸ ಸಂಗ್ರಹಣೆಗೆ ಹಣ ನೀಡಬೇಕೆಂಬ ಕಾರಣಕ್ಕೆ ನಗರಸಭೆ ವಾಹನಗಳಿಗೆ ಕಸ ನೀಡದೆ ಎಲ್ಲೇಂದರಲ್ಲಿ ಎಸೆಯುತ್ತಿದ್ದಾರೆ. ಹಸಿಕಸ, ಒಣಕಸ ಬೇರ್ಪಡಿಸದೇ ನೀಡುತ್ತಿರುವುದರಿಂದ ಕಸ ವಿಲೇವಾರಿಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು. 

ಪ್ರತೀ ವಾರ ಬುಧವಾರ ಮತ್ತು ಶನಿವಾರದ ದಿನದಂದು ಒಣಕಸ, ಹಸಿಕಸವನ್ನು ಬೇರ್ಪಡಿಸಿ ಸಂಗ್ರಹಣೆ ಮಾಡಲು ದಿನ ನಿಗದಿ ಮಾಡಲಾಗಿದೆ. ಸಾರ್ವಜನಿಕರು ನಗರಸಭೆ ಸಿಬ್ಬಂದಿಗೆ ಹಸಿ ಕಸ, ಒಣಕಸ ಬೇರ್ಪಡಿಸಿ ಕೊಡುವಂತೆ ಅವರ ನಗರಸಭೆಯೇ ಮನವೊಲಿಸಿ ಅರಿವು ಮೂಡಿಸಬೇಕು ಎಂದರು.

ನಗರದ ಕೆಲ ಬಡಾವಣೆಗಳಲ್ಲಿ ಹಸಿಕಸ, ಒಣಕಸ ಬೇರ್ಪಡಿಸಿಕೊಡುವಂತೆ ಸಾರ್ವಜನಿಕರ ಮನವೊಲಿಸುವಲ್ಲಿ ನಗರಸಭೆ ಸಿಬ್ಬಂದಿ ವಿಫಲವಾಗಿದ್ದು, ಅಂತಹ ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆ ಮೇಲ್ವಿಚಾರಕರು ಸಾರ್ವಜನಿಕರ ಮನವೊಲಿಸುವಂತೆ ನಗರಸಭೆ ಆಯುಕ್ತ ಇದೇ ವೇಳೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. 

ಸಭೆಯಲ್ಲಿ ನಗರಸಭೆ ಆರೋಗ್ಯ ಪರಿವೀಕ್ಷಕರಾದ ಶಶಿರಾಜ್ ಅರಸ್, ಶ್ರೀನಿವಾಸ್, ರಂಗಪ್ಪ, ವೆಂಕಟೇಶ್, ಮೇಲ್ವಿಚಾರಕರಾದ ಅಣ್ಣಯ್ಯ, ಸತೀಶ್, ರಮೇಶ್ ಮಂಜುನಾಥ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News