×
Ad

ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟ: ಬಡಗಲಪುರ ನಾಗೇಂದ್ರ

Update: 2020-09-06 22:51 IST

ಮೈಸೂರು,ಸೆ.6: ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.21 ರಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ರವಿವಾರ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಕ್ರಿಯಾ ಸಮಿತಿ ಸಭೆ ನಡೆಸಿ ವಿಧಾನಮಂಡಲದ ಅಧಿವೇಶನ ಸೆ.21 ರಿಂದ 30ರ ವರೆಗೆ ನಡೆಯಲಿದ್ದು, ಇದೇ ಅವಧಿಯಲ್ಲಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುವಂತೆ ನಿರ್ಧರಿಸಿದರು. ಸಾಹಿತಿ ದೇವನೂರ ಮಹಾದೇವ ಒಳಗೊಂಡಂತೆ ಹಲವು ಮುಖಂಡರು ಪಾಲ್ಗೊಂಡರು.

ವಿಧಾನಮಂಡಲದ ಅಧಿವೇಶನ ನಡೆಯಲಿರುವ 10 ದಿನ ರಾಜ್ಯದಾದ್ಯಂತ ನಡೆಯಲಿರುವ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ವ್ಯಕ್ತಿ, ಸಂಘಟನೆ ಎಂಬ ಭೇದಭಾವ ತೊರೆದು “ಐಕ್ಯ ಹೋರಾಟ” ಎಂಬ ಹೆಸರಿನಡಿ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಒಪ್ಪಿಕೊಂಡರು. 

ಸಭೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ರೈತ, ಕಾರ್ಮಿಕ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಹೋರಾಟಕ್ಕೆ ಅಂತಿಮ ರೂಪ ನೀಡಲು ಸೆ.13 ರಂದು ಬೆಂಗಳೂರಿನಲ್ಲಿ ಇನ್ನೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು. 

ಬೆಂಗಳೂರಿನಲ್ಲಿ ಸೆ.21 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಅಹೋರಾತ್ರಿ ಧರಣಿ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳ ಜನರು ಪಾಲ್ಗೊಳ್ಳುವರು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ವಿವಿಧ ರೀತಿಯಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸಭೆಯ ಬಳಿಕ ತಿಳಿಸಿದರು.

ಕೃಷಿ ವಿಜ್ಞಾನಿ ಡಾ.ಪ್ರಕಾಶ್ ಕಮ್ಮರಡಿ, ಈ ಸುಗ್ರೀವಾಜ್ಞೆಗಳು ಕೇವಲ ರೈತರು ಮತ್ತು ಕಾರ್ಮಿಕರಿಗೆ ಮಾತ್ರ ಮಾರಕವಾಗಿಲ್ಲ. ಜನಸಾಮಾನ್ಯರ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಭೂಸುಧಾರಣೆಗೆ ಸಂಬಂಧಿಸಿದ ಎರಡು ಹಾಗೂ ಎಪಿಎಂಸಿಗೆ ಸಂಬಂಧಿಸಿದ ಒಂದು ಹಾಗೂ ಇದಕ್ಕೆ ಪೂರಕವಾದ ಇತರ ಮೂರು ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಅವುಗಳನ್ನು ವಾಪಸ್ ಪಡೆಯಲು ಒಗ್ಗಟ್ಟಿನ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಹಿಂದ್ ಮಜ್ದೂರ್ ಕಿಸಾನ್ ಸಂಘಟನೆಯ ಕಾಳಪ್ಪ, ಸಿಪಿಎಂ ಮುಖಂಡ ಯಶವಂತ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಯಶೋಧಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News