ನಿರ್ಬಂಧ ತೆರವು: ಮುಳ್ಳಯ್ಯನಗಿರಿ ಸೊಬಗು ಸವಿದ ಜನಸಾಗರ

Update: 2020-09-06 18:07 GMT

ಚಿಕ್ಕಮಗಳೂರು, ಸೆ.6: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೊರೋನ ಸೋಂಕಿನ ಆರ್ಭಟ, ಸರಣಿ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊರೋನ ಸೋಂಕು ಹರಡುವ ಭೀತಿಯಿಂದ ಜಿಲ್ಲೆಯ ಪ್ರವಾಸಿತಾಣಗಳಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ವಾರಾಂತ್ಯದ ರಜಾ ದಿನಗಳಲ್ಲಿ ಪ್ರವಾಸಿಗರ ದಂಡು ಹರಿದು ಬಂದಿದ್ದು, ಮುಳ್ಳಯ್ಯನಗಿರಿ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳು ರವಿವಾರ ಪ್ರವಾಸಿಗರಿಂದ ತುಂಬಿ ತುಳುಕಿದವು.

ಕೊರೋನ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವುದನ್ನು ಜಿಲ್ಲಾಡಳಿತ ನಿಷೇದಿಸಿತ್ತು. ಸರಕಾರಗಳು ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಕಳೆದ ವಾರ ಜಿಲ್ಲಾಡಳಿತ ತೆರವು ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿರ್ಬಂಧ ತೆರವು ಮಾಡಿದ ಮೊದಲ ವಾರದಲ್ಲಿ ಶನಿವಾರ ಮತ್ತು ರವಿವಾರ ಜಿಲ್ಲೆ, ರಾಜ್ಯ, ಹೊರರಾಜ್ಯಗಳಿಂದ ಪ್ರವಾಸಿಗರ ದಂಡೆ ಜಿಲ್ಲೆಯ ಪ್ರವಾಸಿತಾಣಗಳಿಗೆ ಹರಿದು ಬಂದಿದ್ದು, ನಗರದ ಬಹುತೇಕ ಹೊಟೇಲ್, ಲಾಡ್ಜ್, ಹೋಮ್ ಸ್ಟೇ, ರೆಸಾರ್ಟ್‍ಗಳು ಭರ್ತಿಯಾಗಿದ್ದವು. 

ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ಮುಳ್ಳಯ್ಯನಗಿರಿ ಗಿರಿಶ್ರೇಣಿ ಪ್ರದೇಶ ರವಿವಾರ ಪ್ರವಾಸಿಗರಿಂದ ತುಂಬಿ ತುಳುಕಿತ್ತು. ರವಿವಾರ ಒಂದೇ ದಿನ ಬೆಳಗ್ಗೆಯಿಂದ ಸಂಜೆಯವರೆಗೂ 780 ಕಾರು, 380 ಬೈಕ್, 70 ಟಿಟಿ ವಾಹನಗಳಲ್ಲಿ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಭೇಟಿ ನೀಡಿ ರಮಣೀರ ಪರಿಸರದ ಸೊಬಗುಂಡರು. ಮುಳ್ಳಯ್ಯಗಿರಿಗೆ ಸಾಗುವ ಮಾರ್ಗದಲ್ಲಿರುವ ರಾಮನಹಳ್ಳಿ ಗೇಟ್‍ನಲ್ಲಿ ವಾಹನಗಳನ್ನು ತಡೆಯುತ್ತಿದ್ದ ಚೆಕ್‍ಪೋಸ್ಟ್ ಸಿಬ್ಬಂದಿ, ವಾಹನ ಸವಾರರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಗಿರಿ ಪ್ರದೇಶ ವೀಕ್ಷಿಸಬೇಕೆಂದು, ಸ್ವಚ್ಛತೆ ಕಾಪಾಡಬೇಕೆಂದು ಪ್ರವಾಸಿಗರಿಗೆ ಸೂಚನೆ ನೀಡಿ ಕಳಿಸುತ್ತಿದ್ದ ದೃಶ್ಯಗಳು ಶನಿವಾರ ಬೆಳಗ್ಗೆ ಮತ್ತು ರವಿವಾರ ಕಂಡು ಬಂತು. ಜಿಲ್ಲೆಯ ಇತರ ಪ್ರವಾಸಿ ತಾಣಗಳ ಪೈಕಿ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿ ವೀಕ್ಷಣೆಗೆ ಪ್ರವಾಸಿಗರು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಉಳಿದಂತೆ ಜಿಲ್ಲೆಯ ಪ್ರಮುಖ ಧಾರ್ಮಿಕರ ಕ್ಷೇತ್ರಗಳಾದ ಹೊರನಾಡು ಹಾಗೂ ಶೃಂಗೇರಿ ದೇವಾಲಯಗಳಿಗೂ ದೂರದೂರುಗಳಿಂದ ಪ್ರವಾಸಿಗರು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News