×
Ad

ಶಿವಮೊಗ್ಗ: ಕೇಂದ್ರ ಸರಕಾರದ ವಿರುದ್ಧ ಎನ್‌ಎಸ್‌ಯುಐ ಕಾರ್ಯಕರ್ತರಿಂದ ವಿಶಿಷ್ಟ ಪ್ರತಿಭಟನೆ

Update: 2020-09-07 13:16 IST

ಶಿವಮೊಗ್ಗ, ಸೆ.7: ದೇಶದ ವಿದ್ಯಾವಂತ ಯುವಜನತೆಗೆ ಉದ್ಯೋಗ ಸೃಷ್ಠಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಇದರ ವಿರುದ್ಧ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಇಂಜಿನಿಯರಿಂಗ್, ಬಿಕಾಂ, ಡಿಪ್ಲೊಮಾ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಶಿವಮೊಗ್ಗದ ಯುವ ವಿದ್ಯಾರ್ಥಿಗಳು ಮಹಾವೀರ ವೃತ್ತದಲ್ಲಿ ಪೇಪರ್ ಮಾರಾಟ, ಟೀ ಮಾರಾಟ, ಮಾಸ್ಕ್ ಮಾರುವುದು ಸೇರಿದಂತೆ ಇತರ ರೀತಿಯಲ್ಲಿ ಯುವ ಜನತೆಯ ಉದ್ಯೋಗ ಸಮಸ್ಯೆಯ ಕುರಿತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ವಿದ್ಯಾವಂತ ಯುವಜನತೆಗೆ ಉದ್ಯೋಗ ನೀಡುವಲ್ಲಿ ಯಾವುದೇ ರೀತಿ ಪರಿಣಾಮಕಾರಿ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸ ಮಾಡಲಿಲ್ಲ. ಅಲ್ಲದೇ ಈ ವರ್ಷದಲ್ಲಿ ಕೋವಿಡ್ ಕಾರಣಕ್ಕೆ ಲಕ್ಷಾಂತರ ಯುವ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ನೂರಾರು ಕಂಪೆನಿಗಳು ಬಾಗಿಲು ಮುಚ್ಚಿದವು. ಇದರಿಂದ ದೇಶದ ಯುವ ಉದ್ಯೋಗಿಗಳು ಮತ್ತಷ್ಟು ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡರು ಎಂದು ದೂರಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಶ್ರೀಜಿತ್ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಧುಸೂಧನ್ ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ, ವಿನ್ಯಾಸ್, ಮಂಜು ಪುರಲೆ, ಅಬ್ದುಲ್ ಸತ್ತಾರ್, ಗಿರೀಶ್, ಶಿವು, ಭರತ್, ಸಂದೀಪ್, ಪ್ರಮೋದ್, ಆಕಾಶ್, ರವಿ, ಹೇಮಂತ್, ಸಂಜಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News