×
Ad

ಸಂಸದ ಹೆಗಡೆ ಕಾರಿಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2020-09-07 16:50 IST

ಬೆಳಗಾವಿ, ಸೆ.8: ಭೂಮಿ ಪೂಜೆಗೆ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಸಂಸದ ಅನಂತಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ 50 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾನಾಪುರದಲ್ಲಿ ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಖಾನಾಪುರ ಕ್ಷೇತ್ರದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಕೊರೋನದಿಂದಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬರಲು ಸಾಧ್ಯವಾಗದಿರುವ ಸಮಯವನ್ನೇ ನೋಡಿಕೊಂಡು ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಶಾಸಕರು ಗುಣಮುಖರಾಗುವವರೆಗೂ ಕಾರ್ಯಕ್ರಮ ಮುಂದೂಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.

ಅನಂತ ಕುಮಾರ್ ಹೆಗಡೆ ಬರುವುದಕ್ಕೆ ಮುನ್ನವೇ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿ ಆವರಣಕ್ಕೆ ಅವರನ್ನು ಕರೆದೊಯ್ದಿದ್ದಾರೆ. ತಮ್ಮನ್ನು ವಶಕ್ಕೆ ಪಡೆದ ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News