ಐಎಎಸ್ ಅಧಿಕಾರಿಗಳ ಕಿರುಕುಳ ಆರೋಪ: ರಿಕ್ಷಾ ಚಾಲಕ ವೃತ್ತಿಗೆ ಇಳಿದ ವೈದ್ಯ
ದಾವಣಗೆರೆ, ಸೆ.7: ಐಎಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆರೋಗ್ಯ ಇಲಾಖೆಯ ಹಿರಿಯ ವೈದ್ಯರೊಬ್ಬರು ಪ್ರತಿಭಟನಾತ್ಮಕವಾಗಿ ಆಟೊ ರಿಕ್ಷಾ ಚಾಲಕ ವೃತ್ತಿಗೆ ಇಳಿದಿರುವ ಪ್ರಸಂಗವೊಂದು ದಾವಣಗೆರೆಯಲ್ಲಿ ನಡೆದಿದೆ.
ತಾಲೂಕಿನ ಬಾಡಾ ಗ್ರಾಮದವರಾದ ಡಾ. ರವೀಂದ್ರನಾಥ ಎಂ.ಎಚ್. ಎಂಬವರು ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ಬೇಸತ್ತಿದ್ದಾರೆ ಎನ್ನಲಾಗಿದ್ದು, ಇದೀಗ ಆಟೊ ಓಡಿಸಲಾರಂಭಿಸಿದ್ದಾರೆ. ಸುಮಾರು 24 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಸದ್ಯ ಬಳ್ಳಾರಿ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರ್‌ಸಿಎಚ್ ಆಗಿದ್ದಾರೆ.
ಜಗಳೂರು ತಾಲೂಕು ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ವರ್ಷ ಸೇವೆ ಸಲ್ಲಿಸಿದ ಇವರು, ನಂತರ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. ಬಳಿಕ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಯಾಗಿ 3 ವರ್ಷ ಕಾರ್ಯನಿರ್ವಹಿಸಿದರು. ಈ ನಡುವೆ 2017ರಲ್ಲಿ ಇವರು ಬಳ್ಳಾರಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿ ನೇಮಕಗೊಂಡರು. ಬಳ್ಳಾರಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿದ್ದ ಸಂದರ್ಭ ತನ್ನ ಮೇಲೆ ಐಎಎಸ್ ಅಧಿಕಾರಿಗಳು ವೈಯಕ್ತಿಕ ದ್ವೇಷ ಸಾಧಿಸಿ ತೊಂದರೆ ಕೊಟ್ಟರು ಎಂದು ಡಾ.ರವೀಂದ್ರನಾಥ್ ಆರೋಪಿಸಿದ್ದಾರೆ.
2019ರ ಜೂನ್‌ನಲ್ಲಿ ತಮ್ಮನ್ನು ಅಮಾನತು ಮಾಡಲಾಯಿತು. ಇದರ ವಿರುದ್ಧ ಎರಡು ಬಾರಿ ಕೆಎಟಿ ನ್ಯಾಯಾಲಯದ ಮೊರೆ ಹೋದಾಗ ತನ್ನ ಪರವಾಗಿಯೇ ತೀರ್ಪು ಬಂದಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ. ಒಂದು ತಿಂಗಳಲ್ಲಿ ಜಿಲ್ಲಾಮಟ್ಟದ ಹುದ್ದೆ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಇನ್ನೂ ತನಗೆ ಪೋಸ್ಟಿಂಗ್ ಮಾಡದೆ ಆರೋಗ್ಯ ಇಲಾಖೆ ಸತಾಯಿಸುತ್ತಿದೆ. ಆ ಮೂಲಕ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಡಾ.ರವೀಂದ್ರನಾಥ್ ಆರೋಪಿಸಿದ್ದಾರೆ. ಇಲಾಖೆಯಲ್ಲಿ ಹಿರಿತನವನ್ನು ಪರಿಗಣಿಸುತ್ತಿಲ್ಲ. ಭ್ರಷ್ಟಾಚಾರ ನಡೆಯುತ್ತಿದೆ. ಹದಿನೈದು ತಿಂಗಳಿಂದ ತನಗೆ ವೇತನ ಕೂಡಾ ಸಿಕ್ಕಿಲ್ಲ ಎಂದು ದೂರಿರುವ ಡಾ.ರವೀಂದ್ರನಾಥ್, ಇದನ್ನು ವಿರೋಧಿಸಿ ಹೋರಾಟಕ್ಕೆ ಇಳಿದಿದ್ದೇನೆ. ಈ ಬಗ್ಗೆ ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.
ಸದ್ಯ ಇವೆಲ್ಲದರಿಂದ ಬೇಸತ್ತಿರುವ ಡಾ.ರವೀಂದ್ರನಾಥ್ ಹೊಸ ಆಟೋ ರಿಕ್ಷಾವೊಂದನ್ನು ಖರೀದಿಸಿ ನಗರದಲ್ಲಿ ಓಡಿಸುತ್ತಿದ್ದಾರೆ. ಆಟೋದ ಮೇಲೆ ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ಡಾ.ರವೀಂದ್ರನಾಥ್ ಅವರ ಸಮಸ್ಯೆಯನ್ನು ಅರಿತ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.