ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಲ್ಲ: ಹೈಕೋರ್ಟ್
ಬೆಂಗಳೂರು, ಸೆ.7: ಮಹಾತ್ಮಾಗಾಂಧಿ ಪ್ರತಿಮೆ ಮುಂಭಾಗದಲ್ಲಿರುವ ಜಂಕ್ಷನ್‍ನಲ್ಲಿ ಟಾನಿಕ್ ಮದ್ಯದಂಗಡಿಗೆ ಲೈಸೆನ್ಸ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಹಾತ್ಮಾ ಗಾಂಧಿ ಪ್ರತಿಮೆ ಧಾರ್ಮಿಕ ಕೇಂದ್ರವೂ ಅಲ್ಲ. ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವೂ ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಈ ಕುರಿತು ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರೂ ಆಗಿರುವ ಎ.ವಿ.ಅಮರನಾಥನ್ ಅವರು ವಾದಿಸಿ, ಕರ್ನಾಟಕ ಅಬಕಾರಿ ಲೈಸನ್ಸುಗಳು(ಸಾಮಾನ್ಯ ಷರತ್ತುಗಳು) ನಿಯಮ 1967ರ ಸೆಕ್ಷನ್ 5ರಲ್ಲಿ ಧಾರ್ಮಿಕ ಕೇಂದ್ರ, ಸರಕಾರಿ ಕಚೇರಿಗಳು ಮತ್ತು ಶಾಲೆ, ಆಸ್ಪತ್ರೆ ಮತ್ತಿತರ ಸ್ಥಳಗಳಿಂದ ನೂರು ಮೀಟರ್ ಒಳಗೆ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಬಾರದು. ಆದರೆ, ಗಾಂಧಿ ಪ್ರತಿಮೆಯ ಮುಂಭಾಗದ ವೃತ್ತದಲ್ಲಿಯೇ ಟಾನಿಕ್ ಎನ್ನುವ ಮದ್ಯದ ಅಂಗಡಿಗೆ ಪರವಾನಗಿ ನೀಡಲಾಗಿದೆ. ಅದು ಗಾಂಧಿ ಪ್ರತಿಮೆಯಿಂದ 20 ಮೀಟರ್ ದೂರದಲ್ಲಿದೆ. ಜತೆಗೆ ಚರ್ಚ್ ಮುಂದೆಯೇ ಇದೆ. ಟಾನಿಕ್ ಮದ್ಯದ ಅಂಗಡಿಯ ಎದುರಿಗೆ ಬಾಲ ಭವನ ಇದೆ. ಹೀಗಾಗಿ, ಆ ಲೈಸೆನ್ಸ್ ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮಹಾತ್ಮ ಗಾಂಧಿ ಪ್ರತಿಮೆ ಧಾರ್ಮಿಕ ಕೇಂದ್ರವಲ್ಲ. ಹೀಗಾಗಿ, ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ತಿಳಿಸಿದೆ. ಜೊತೆಗೆ ಸರ್ವೆ ನಂತರ ಲೈಸೆನ್ಸ್ ನಿಯಮಬದ್ಧವಾಗಿದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.