ನೂತನ ಶಿಕ್ಷಣ ನೀತಿಯಿಂದ ಜ್ಞಾನ ಆರ್ಥಿಕತೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: ಪ್ರಧಾನಿ ಮೋದಿ

Update: 2020-09-07 13:21 GMT

ಬೆಂಗಳೂರು, ಸೆ.7: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ 21ನೇ ಶತಮಾನದಲ್ಲಿ ಭಾರತವು ‘ಜ್ಞಾನ ಆರ್ಥಿಕತೆʼಯಲ್ಲಿ ಜಗತ್ತಿನಲ್ಲಿಯೆ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಸೋಮವಾರ ಹೊಸದಿಲ್ಲಿಯಿಂದ ದೇಶದ ಎಲ್ಲ ರಾಜ್ಯಪಾಲರು ಮತ್ತು ಶಿಕ್ಷಣ ಸಚಿವರ ಎರಡು ದಿನಗಳ ಆನ್‍ಲೈನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಸಂವಾದ ನಡೆಸಿದ ಮೋದಿ, ಶಿಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಹೆಚ್ಚು ಸಹಕಾರಿಯಾಗಲಿದೆ ಎಂದರು.

ದೇಶದ ಶಿಕ್ಷಣ ನೀತಿ: ಶಿಕ್ಷಣ ನೀತಿಯಲ್ಲಿ ಸರಕಾರದ ಪ್ರಭಾವ ಕಡಿಮೆ ಇರಬೇಕು, ಏಕೆಂದರೆ ಇದು ಸರಕಾರದ ಶಿಕ್ಷಣ ನೀತಿಯಲ್ಲ, ದೇಶದ ಶಿಕ್ಷಣ ನೀತಿ. ವಿದೇಶ, ರಕ್ಷಣಾ ನೀತಿ ಹೇಗೆ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು ಎಂದು ಇದೇ ವೇಳೆ ಪ್ರಧಾನಿ ಹೇಳಿದರು.

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕೆ ಪ್ರಾಯೋಗಿಕ ಕಲಿಕೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದಕ್ಕೆ ಅವಕಾಶ ಕಲ್ಪಿಸಲಿದೆ ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಣ ನೀತಿ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳು ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ ಎಂದು ಪ್ರಧಾನಿ ನುಡಿದರು.

ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾದ ಎಲ್ಲ ಅಂಶಗಳೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವೆ ಹಾಗೂ ದೇಶದ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ನೀತಿ ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.

ಹೊಸ ದಿಕ್ಸೂಚಿ: ಶಿಕ್ಷಣ ನೀತಿಯು ಇಡೀ ದೇಶಕ್ಕೆ ಹೊಸ ದಿಕ್ಸೂಚಿ ನೀಡುವ ಶಕ್ತಿ ಹೊಂದಿದೆ ಎಂದ ಪ್ರಧಾನಿ, ವಿವಿಧ ಕ್ಷೇತ್ರಗಳೂ ಸೇರಿ ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ದೇಶದ ಯುವಜನತೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿ ದಾರಿ ತೋರಿಸುತ್ತದೆ ಎಂದು ಮೋದಿ ಹೇಳಿದರು.

ದೇಶಾದ್ಯಂತ ಶಿಕ್ಷಣ ನೀತಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಸ್ವಾಗತ ವ್ಯಕ್ತವಾಗಿದೆ ಎಂಬುದನ್ನು ನಾನು ಬಲ್ಲೆ. ಹೀಗಾಗಿ ದೇಶದ ಎಲ್ಲ ನಿರೀಕ್ಷೆಗಳಿಗೆ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಆದುದರಿಂದ, ಈ ನೀತಿಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾಗಿ ಕಟಿಬದ್ಧವಾಗಿ ಎಲ್ಲ ರಾಜ್ಯಗಳು ಜಾರಿ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಶಿಕ್ಷಣ ನೀತಿಯೂ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಹೊಸ ಉತ್ಸಾಹ ಸೃಷ್ಟಿಸಲಿದೆ. ಪ್ರಾಯೋಗಿಕವಾಗಿ ಮಕ್ಕಳು ಮುಂದಿನ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ. ಜತೆಗೆ, ತಮ್ಮ ಪ್ರತಿಭೆಯನ್ನು ತೋರಿಸಲು ಅತ್ಯಂತ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಉನ್ನತಮಟ್ಟವನ್ನು ಮುಟ್ಟಲಿದೆ ಎಂದು ಮೋದಿ ಪ್ರತಿಪಾದಿಸಿದರು.

ರಾಷ್ಟ್ರಪತಿ ನಿರೀಕ್ಷೆ: ವರ್ಚುಯಲ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಷ್ಟ್ರೀಯ ಶಿಕ್ಷಣ ನೀತಿಯು ಇವತ್ತಿನ ಮಹತ್ತ್ವದ ಅಗತ್ಯವಾಗಿದ್ದು, ದೇಶಾದ್ಯಂತ ನೀತಿಯು ಆದ್ಯತೆಯ ಮೇರೆಗೆ ಜಾರಿಯಾಗಬೇಕಿದೆ ಎಂದು ಕರೆ ನೀಡಿದರು.

ಒಮ್ಮೆ ನೀತಿ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಂಡರೆ ಪ್ರಸಕ್ತ ಶಿಕ್ಷಣ ನೀತಿಯ ಸ್ವರೂಪವೇ ಬದಲಾಗಲಿದೆ. ಬೋಧನೆಯಲ್ಲಿ ಗುಣಮಟ್ಟ ಹಾಗೂ ಸಂಶೋಧನೆಯಲ್ಲಿ ಉತ್ತಮ ಸಾಧನೆಗೆ ಅದು ಸಹಕಾರಿಯಾಗಲಿದೆ. ಬಹುವಿಷಯಗಳ ಬೋಧನೆಯ ಜತೆಗೆ, ತಮಗೆ ಅಗತ್ಯವಾದ ವಿಷಯಗಳ ಕಲಿಯಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಇರುತ್ತದೆ. ಹೀಗಾಗಿ ಭಾರತದ ಮುಂದಿನ ಬೆಳವಣಿಗೆಗೆ ನೂತನ ಶಿಕ್ಷಣ ನೀತಿಯು ಮಹತ್ತ್ವದ ಕಾಣಿಕೆ ನೀಡಲಿದೆ ಎಂಬುದು ತಮ್ಮ ಅಚಲ ನಂಬಿಕೆ ಎಂದು ರಾಷ್ಟ್ರಪತಿ ಹೇಳಿದರು.

ಸಮ್ಮೇಳನದಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಸೇರಿದಂತೆ ಎಲ್ಲ ರಾಜ್ಯಗಳ ರಾಲ್ಯಪಾಲರು ಹಾಗೂ ಶಿಕ್ಷಣ ಸಚಿವರು ಭಾಗಿಯಾಗಿದ್ದರು. ರಾಜ್ಯದ ವತಿಯಿಯಿಂದ ರಾಜ್ಯಪಾಲ ವಜೂಭಾಯಿ ವಾಲ, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬೆಂಗಳೂರು ವಿವಿ ಉಪ ಕುಲಪತಿ ಪ್ರೊ.ಕೆ.ವೇಣುಗೋಪಾಲ್, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮುಖ್ಯಸ್ಥ ಕಸ್ತೂರಿ ರಂಗನ್, ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News