ಈ ಆತ್ಮಹತ್ಯೆಗಳ ಬಗ್ಗೆ ತನಿಖೆ ನಡೆಯಬೇಡವೇ?

Update: 2020-09-08 06:11 GMT

ಒಂದು ಶಂಕಿತ ಆತ್ಮಹತ್ಯೆಗೆ ಕೊಲೆಯ ರೂಪ ನೀಡುವ ಪ್ರಯತ್ನದ ಮೂಲಕ ‘ಆತ್ಮಹತ್ಯೆಯ ಹೆಸರಲ್ಲಿ ನಡೆದ ಬರ್ಬರ ಕೊಲೆ’ಗಳನ್ನ್ನು ಸರಕಾರ ಮುಚ್ಚಿ ಹಾಕಲು ಹೊರಟಿದೆ. ಮುಂಬರುವ ಬಿಹಾರ ಚುನಾವಣೆಯಲ್ಲಿ ಈ ದೇಶದ ಸದ್ಯದ ಆರ್ಥಿಕ ಪತನವೇ ಮುಖ್ಯ ವಿಷಯವಾಗಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಮಾಧ್ಯಮಗಳನ್ನು ಬಳಸಿಕೊಂಡು ‘ಸುಶಾಂತ್ ಸಿಂಗ್ ರಜಪೂತ್’ ಅವರ ಆತ್ಮಹತ್ಯೆ ಪ್ರಕರಣವನ್ನೇ ಮುಖ್ಯ ಚುನಾವಣಾ ವಿಷಯವಾಗಿಸಲು ಹೊರಟಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ಕೊಲೆಯೆಂದು ಕರೆಯುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ, ಅದನ್ನು ಸಿಬಿಐಗೆ ಒಪ್ಪಿಸಲಾಯಿತು. ಸುಶಾಂತ್ ಸಿಂಗ್ ಪ್ರಕರಣದಲ್ಲಿ ತೋರಿಸಿದ ಆಸಕ್ತಿಯನ್ನು ಸರಕಾರ, ದಿಲ್ಲಿಯಲ್ಲಿ ನಡೆದ 50ಕ್ಕೂ ಅಧಿಕ ಜನರ ಬರ್ಬರ ಹತ್ಯೆಯ ಕುರಿತಂತೆ ತೋರಿಸಲಿಲ್ಲ. ಒಂದು ಸ್ವತಂತ್ರ ತನಿಖಾ ಸಂಸ್ಥೆಯಿಂದ ಹತ್ಯೆಗಳ ತನಿಖೆ ನಡೆಸಬೇಕು ಎನ್ನುವ ಬೇಡಿಕೆಗೆ ಸರಕಾರ ಸಂಪೂರ್ಣ ಕಿವುಡಾಯಿತು. ಇದೀಗ ಒಬ್ಬ ನಟನ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನಗತ್ಯ ಕಾಳಜಿ ತೋರಿಸುತ್ತಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ನಟ ಮಾದಕದ್ರವ್ಯ ಸೇವಿಸುತ್ತಿರುವುದು ಬೆಳಕಿಗೆ ಬಂದಿತ್ತು. ಜೊತೆಗೆ ಆತ ಮಾನಸಿಕವಾಗಿ ಖಿನ್ನತೆಯನ್ನು ಎದುರಿಸುತ್ತಿದ್ದು ಆದಕ್ಕೆ ಸಂಬಂಧಿಸಿದ ಔಷಧಿಗಳನ್ನೂ ಸೇವಿಸುತ್ತಿದ್ದ ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಇಷ್ಟಾಗಿಯೂ ಪ್ರಕರಣವನ್ನು ಸಿಬಿಐಯ ತನಿಖೆಗೆ ಒಪ್ಪಿಸಲಾಗಿದೆ. ಇದೀಗ ತನಿಖೆ ಬಾಲಿವುಡ್‌ನ್ನು ಸುತ್ತಿಕೊಂಡಿರುವ ಡ್ರಗ್ಸ್‌ಜಾಲದ ಕಡೆಗೆ ತಿರುಗಿದೆ ಮತ್ತು ಈ ಜಾಲದಲ್ಲೂ ಬಿಜೆಪಿಯೊಂದಿಗೆ ನಂಟನ್ನು ಹೊಂದಿರುವ ಹಲವರ ಹೆಸರುಗಳು ಬಹಿರಂಗವಾಗುತ್ತಿವೆ. ಕರ್ನಾಟಕದ ಡ್ರಗ್ಸ್ ಕುರಿತ ತನಿಖೆಯಲ್ಲೂ ಬಿಜೆಪಿಯೊಳಗಿರುವ ಹಲವು ಶಕ್ತಿಗಳ ನಂಟು ಬೆಳಕಿಗೆ ಬರುತ್ತಿವೆ.

ಸುಶಾಂತ್ ಸಿಂಗ್ ಆತ್ಮಹತ್ಯೆಯ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಈ ದೇಶದಲ್ಲಿ 2019ರಲ್ಲಿ 1,39,123ರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಶೇ. 25ರಷ್ಟು ಸಾವಿನ ಪ್ರಕರಣ ದಿನಗೂಲಿ ಕಾರ್ಮಿಕರಿಗೆ ಸಂಬಂಧಿಸಿದ್ದಾಗಿದೆ. 2019ರಲ್ಲಿ ದಿನಗೂಲಿ ನೌಕರರ ಆತ್ಮಹತ್ಯೆ ಪ್ರಕರಣ ದ್ವಿಗುಣಗೊಂಡಿದ್ದು ಶೇ.23.4ಕ್ಕೆ ಹೆಚ್ಚಿದೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ತಿಳಿಸಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರನ್ನು ಈ ವರದಿಯಲ್ಲೇನಾದರೂ ಸೇರಿಸಿದರೆ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆೆ. ಅತ್ಯಂತ ಆತಂಕಕಾರಿ ಅಂಶವೆಂದರೆ, 2020ರಲ್ಲಿ ಈ ಆತ್ಮಹತ್ಯೆಗಳು ದುಪ್ಪಟ್ಟು ಆಗುವ ಸಾಧ್ಯತೆಗಳಿವೆ. ಯಾಕೆಂದರೆ, 2019ರ ವರ್ಷದಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆಯಲ್ಲಿ ಯಾವ ಅಂಶಗಳು ತನ್ನ ಪಾತ್ರವನ್ನು ವಹಿಸಿತ್ತೋ, ಆ ಅಂಶಗಳು ಈ ವರ್ಷ ಇನ್ನಷ್ಟು ಭೀಕರ ರೂಪ ತಾಳಿವೆ. ಕೃಷಿ ಕ್ಷೇತ್ರದ ಹೊರಗಡೆ ಕೆಲಸ ಮಾಡುವ ದಿನಗೂಲಿ ಕಾರ್ಮಿಕರ ನಿಜವಾದ ಸಂಕಷ್ಟ ಆರಂಭವಾದುದೇ ನೋಟು ನಿಷೇಧದ ಬಳಿಕ. ಕೃಷಿ ಕ್ಷೇತ್ರದ ನಾಶ, ನಷ್ಟಗಳಿಂದ ನಗರ ಸೇರಿ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ನೋಟು ನಿಷೇಧ ಬಹುದೊಡ್ಡ ಹೊಡೆತವಾಗಿತ್ತು. ನೋಟು ನಿಷೇಧದಿಂದಾಗಿ ವೇಗವಾಗಿ ಸಾಗುತ್ತಿದ್ದ ಆರ್ಥಿಕ ಚಟುವಟಿಕೆಗೆ ಒಮ್ಮೆಲೆ ತಡೆ ಬಿತ್ತು. ಇದು ನೇರವಾಗಿ ದುಷ್ಪರಿಣಾಮ ಬೀರಿದ್ದು ನಿರ್ಮಾಣ ಕಾಮಗಾರಿಗಳ ಮೇಲೆ. ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅವಲಂಭಿಸಿದ ಕಾರ್ಮಿಕರು ಬೀದಿಗೆ ಬಿದ್ದರು. ಬಹುತೇಕ ಜನರು ಮತ್ತೆ ತಮ್ಮ ಹಳ್ಳಿಗಳಿಗೆ ವಲಸೆ ಹೋಗತೊಡಗಿದರು. ಆದರೆ ಹಳ್ಳಿಯಲ್ಲೂ ಬದುಕುವ ವಾತಾವರಣವಿರಲಿಲ್ಲ. ಹಳ್ಳಿಗಳು ಜಮೀನ್ದಾರರ ಹಿಡಿತದಲ್ಲಿರುವುದರಿಂದ, ಅವರು ಮತ್ತೆ ಸಾಲದ ಶೂಲಗಳಿಗೆ ತಲೆ ಒಪ್ಪಿಸಬೇಕಾಯಿತು. ಕೂಲಿ ಕಾರ್ಮಿಕರ ಶೋಷಣೆ ಹೆಚ್ಚಾದದ್ದು ಈ ಅವಧಿಯಲ್ಲಿಯೇ. ದಿನಗೂಲಿ ಕಾರ್ಮಿಕರ ಆತ್ಮಹತ್ಯೆಯ ಕಾರಣಗಳೂ ಇಲ್ಲೇ ಇವೆ. ವಾತಾವರಣ ಒಂದಿಷ್ಟು ತಿಳಿಯಾಗುತ್ತಿದ್ದಂತೆಯೇ ಅಳಿದುಳಿದವರು ಮತ್ತೆ ನಗರಗಳಿಗೆ ವಾಪಾಸಾದರು.

ಇನ್ನೇನು ಮತ್ತೆ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೊರೋನ ನೆಪದಲ್ಲ್ಲಿ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಲಾಕ್‌ಡೌನ್ ಕೂಲಿ ಕಾರ್ಮಿಕರ ಮೇಲೆ ಎರಗಿತು. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಮಹಾ ವಲಸೆಯ ಬಳಿಕ, ಈ ಲಾಕ್‌ಡೌನ್ ಸಂದರ್ಭದಲ್ಲಿ ನಡೆದ ಕೂಲಿ ಕಾರ್ಮಿಕರ ಮಹಾವಲಸೆ ಅತ್ಯಂತ ಬರ್ಬರವಾದುದು. ಕೂಲಿ ಕಾರ್ಮಿಕರನ್ನು ಈ ದೇಶದ ಜನರೇ ಅಲ್ಲವೇನೋ ಎಂಬಂತೆ ಸರಕಾರ ನಡೆಸಿಕೊಂಡಿತು. ಒಂದು ದಿನ ಕೂಲಿಯಿಲ್ಲದೇ ಇದ್ದರೆ ಕಾರ್ಮಿಕರು ಅರೆ ಹೊಟ್ಟೆಯಲ್ಲಿರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಿರುವಾಗ ಎರಡು ತಿಂಗಳು ಯಾವುದೇ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಹೊಟ್ಟೆಗೆ ಏನು ತಿನ್ನಬೇಕು? ನಗರಗಳಲ್ಲಿ ಊಟ, ವಸತಿ ಯಾವುದೂ ಸಿಗದ ಕಾರಣ ಅನಿವಾರ್ಯವಾಗಿ ಸಹಸ್ರಾರು ಕಾರ್ಮಿಕರು ತಮ್ಮ ಊರಿಗೆ ಮರಳಿ ಪ್ರಯಾಣ ಹೊರಡಲು ಸಿದ್ಧರಾದರು. ಆದರೆ ಸರಕಾರ ಅದಕ್ಕೂ ಅವಕಾಶ ನೀಡಲಿಲ್ಲ. ಮರಳಿ ಗೂಡು ಸೇರಲು ಯಾವುದೇ ವಾಹನಗಳಿಲ್ಲದ ಕಾರಣದಿಂದ ಬರಿ ಗಾಲಲ್ಲೇ ನಡೆದು ಹಲವರು ಅರ್ಧದಾರಿಯಲ್ಲಿ ಪ್ರಾಣ ಬಿಟ್ಟರು. ಹಲವರು ಊರು ತಲುಪಿದ ಬಳಿಕ ಅಸ್ವಸ್ಥರಾಗಿ ಮೃತಪಟ್ಟರು. ಉಳಿದವರು ಕೆಲಸ ವಿಲ್ಲದೆ ಅನ್ನಾಹಾರದ ಕೊರತೆಯಿಂದ ರೋಗಪೀಡಿತರಾಗಿ ಮರಣ ಹೊಂದಿದರು. ಲಾಕ್‌ಡೌನ್‌ನಲ್ಲಿ ಕೊನೆಗೂ ಊರು ಸೇರಿದ ಅಳಿದುಳಿದ ಕಾರ್ಮಿಕರ ಸ್ಥಿತಿ ಈಗ ಹೇಗಿದೆ? ಅವರು ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಹೇಗೆ ಬದುಕಿದರು? ಲಾಕ್‌ಡೌನ್‌ನಿಂದಾಗಿ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಹೀಗಿರುವಾಗ, ಈ ಕೂಲಿ ಕಾರ್ಮಿಕರು ದಿನದ ಊಟಕ್ಕೆ ಏನು ಮಾಡಿದರು? ಈ ಎಲ್ಲ ಪ್ರಶ್ನೆಗಳನ್ನು ಕೇಳಿದರೆ, ಸರಕಾರ ‘ಎಲ್ಲ ದೇವರ ಆಟ’ ಎಂದು ಆಕಾಶದ ಕಡೆಗೆ ಕೈ ತೋರಿಸುತ್ತಿದೆ.

ನೋಟು ನಿಷೇಧದ ಮೂಲಕ ಈ ದೇಶದ ಅರ್ಥವ್ಯವಸ್ಥೆ ಆತ್ಮಹತ್ಯೆ ಮಾಡಿಕೊಂಡಿತು ಎಂದು ನಾವಿನ್ನೂ ನಂಬಿದ್ದೇವೆ. ನಿಜಕ್ಕೂ ನೋಡಿದರೆ ನೋಟು ನಿಷೇಧ ಆತ್ಮಹತ್ಯೆಯಲ್ಲ, ಅದೊಂದು ಕೊಲೆ. ಯಾವ ಪೂರ್ವ ಯೋಜನೆಗಳೂ ಇಲ್ಲದೆ, ಕೆಲವೇ ಕೆಲವು ಜನರ ಹಿತಾಸಕ್ತಿಯನ್ನು ಇಟ್ಟುಕೊಂಡು ಈ ದೇಶವನ್ನಾಳುವವರೇ ಅರ್ಥವ್ಯವಸ್ಥೆಯನ್ನು ‘ನೋಟು ನಿಷೇಧ’ದ ಹೆಸರಲ್ಲಿ ಬರ್ಬರವಾಗಿ ಕೊಂದು ಹಾಕಿದರು. . ಲಾಕ್‌ಡೌನ್ ಮೂಲಕ ಈ ದೇಶದ ಆರ್ಥಿಕತೆ ಎರಡನೇ ಬಾರಿಗೆ ಆತ್ಮಹತ್ಯೆ ಮಾಡಿಕೊಂಡಿತು. ಲಾಕ್‌ಡೌನ್ ಎನ್ನುವ ಆತ್ಮಹತ್ಯಾಕಾರಕ ನಿರ್ಧಾರವೂ ಸರಕಾರದ ಬೇಜವಾಬ್ದಾರಿಯಿಂದ ನಡೆದ ಇನ್ನೊಂದು ಕೊಲೆಯೇ ಆಗಿದೆ. ಆದುದರಿಂದ, ನೋಟು ನಿಷೇಧ ಮತ್ತು ಲಾಕ್‌ಡೌನ್ ಎನ್ನುವ ಎರಡು ಆತ್ಮಹತ್ಯೆಗಳ ಹಿಂದಿರುವ ಶಕ್ತಿಗಳ ಕುರಿತಂತೆ ಮೊದಲು ತನಿಖೆಯಾಗಬೇಕಾಗಿದೆ. ಈ ಎರಡೂ ಘಟನೆಗಳ ಬಳಿಕ ಈ ದೇಶದಲ್ಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ದುಪ್ಪ್ಪಟ್ಟಾಗಿವೆ. ಸರಕಾರ ಮೊತ್ತ ಮೊದಲು ಈ ಕಾರ್ಮಿಕರ ಆತ್ಮಹತ್ಯೆಯ ಕಾರಣವನ್ನು ಹುಡುಕಬೇಕಾಗಿದೆ. ಕಾರ್ಮಿಕರು ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ಅಥವಾ ಸರಕಾರವೇ ಅವರನ್ನು ಆತ್ಮಹತ್ಯೆಯೆಡೆಗೆ ದೂಡುತ್ತಿದೆಯೇ ಎನ್ನುವ ಸತ್ಯ ಹೊರಬರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News