ತುಮಕೂರು: ಮಾದಕ ವಸ್ತು ಮಾರಾಟ; ಆರು ಆರೋಪಿಗಳ ಬಂಧನ

Update: 2020-09-07 18:09 GMT

ತುಮಕೂರು.ಸೆ, 7: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಬಿಜಿಪಾಳ್ಯ ವೃತ್ತ, ಸಂತೆಪೇಟೆ ಮಾರ್ಗದ ಅಭಯ ಅಂಜನೇಯಸ್ವಾಮಿ ದೇವಾಲಯದ ಪಕ್ಕದಲ್ಲಿ ಇರುವ ಹನುಮಂತರಾಯಪ್ಪ ಅವರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ರಾಜಸ್ಥಾನ ಮೂಲದ ರಾಜುರಾಮ್(32) ನರಸಿರಾಮ್(34) ಅವರನ್ನು ಬಂಧಿಸಿ ಅವರಿಂದ ಸುಮಾರು 3 ಲಕ್ಷ ಬೆಲೆ ಬಾಳುವ 1.511 ಕೆ.ಜಿ ಅಫೀಮ್‍ ಅನ್ನು ವಶಪಡಿಸಿಕೊಂಡು ಅವರ ವಿರುದ್ಧ ಎನ್.ಡಿ.ಪಿ.ಎಸ್. ಕಾನೂನಿನ ಅನ್ವಯ ಕೇಸು ದಾಖಲಿಸಲಾಗಿದೆ.

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸ್‍ನ ಬಳಿ ಮಾರುತಿ ಡಾಬಾ ಮುಂಭಾಗ ಅಕ್ರಮವಾಗಿ ಗಾಂಜಾ ಸೊಪ್ಪು ಸರಬರಾಜು ಮಾಡುತ್ತಿದ್ದ ರಾಮಾಂಜೀ ಎಂಬವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈತ ಚಿಕ್ಕ ಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಗಂಜಲುಗುಂಟೆ ಗ್ರಾಮದ ಮಾರಪ್ಪ ಎಂಬಾತನಿಂದ ಗಾಂಜಾ ಸೊಪ್ಪು ಖರೀದಿಸಿ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಈತ ನೀಡಿದ ಸುಳಿವಿನ ಮೇರೆಗೆ ತುಮಕೂರು ನಗರ ಉಪ್ಪಾರಹಳ್ಳಿಯ ಮಂಜುನಾಥ್. ಜಿ(38) ಸದಾಶಿವನಗರದ ಮುನಿರಾಜು(20), ಕೊರಟಗೆರೆ ತಾಲೂಕು ಮಲ್ಲೆಕಾವು ಗ್ರಾಮದ ಸೀತಾರಾಮಯ್ಯ(66) ಎಂಬವರನ್ನು ಬಂಧಿಸಲಾಗಿದೆ. ಮಾರಪ್ಪ ಎಂಬ ವ್ಯಕ್ತಿ ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಎರಡು ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋ.ನ.ವಂಶಿಕೃಷ್ಣ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News