ಸಿಬಿಐ ತನಿಖೆಗೆ ವಹಿಸಿದ್ದು ಪ್ರಶ್ನಿಸಿ ಡಿಕೆಶಿ ಅರ್ಜಿ ಸಲ್ಲಿಕೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-09-08 12:09 GMT

ಬೆಂಗಳೂರು, ಸೆ.8: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಪ್ರಕರಣವನ್ನು ಸಿಬಿಐಗೆ ವಹಿಸಿದ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಐಟಿ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜುಲೈ 22ರಂದು ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರಾದ ಶಶಿಕುಮಾರ್ ಶಿವಣ್ಣ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ಕೆಲ ಕಾಲ ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆ.29ಕ್ಕೆ ಮುಂದೂಡಿತು.

2019ರ ಸೆ.29ರಂದು ರಾಜ್ಯ ಸರಕಾರ ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ಐಟಿ ದಾಖಲಿಸಿರುವ ಪ್ರಕರಣಗಳನ್ನು ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ವಹಿಸಿ ಆದೇಶ ಹೊರಡಿಸಿದೆ. ಸರಕಾರದ ಈ ಆದೇಶ ರದ್ದು ಕೋರಿ ಅರ್ಜಿದಾರರು 2020ರ ಜೂನ್ 6ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ನಟರಾಜ್ ಅವರಿದ್ದ ಏಕ ಸದಸ್ಯ ಪೀಠ ಮನವಿ ತಿರಸ್ಕರಿಸಿ ಆದೇಶ ಹೊರಡಿಸಿತ್ತು. ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಇಡಿ ದಾಖಲಿಸಿರುವ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿದೆ. ರಾಜ್ಯದಲ್ಲಿ ಸಿಬಿಐ ತನಿಖೆಗೆ ಸರಕಾರ ಸಮ್ಮತಿಸಬೇಕು. ಪ್ರಕರಣದಲ್ಲಿ ಸರಕಾರಿ ಅಧಿಕಾರಿಗಳ ಪಾತ್ರದ ಬಗ್ಗೆ ಆರೋಪಗಳಿವೆ. ಹೀಗಾಗಿ ತನಿಖೆಗೆ ಸರಕಾರದ ಸಮ್ಮತಿ ಅಗತ್ಯವಿತ್ತು ಎಂದು ವಾದಿಸಿದ್ದರು.

2017ರ ಆಗಸ್ಟ್ ನಲ್ಲಿ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಬೆಂಗಳೂರು ಮತ್ತು ಹೊಸದಿಲ್ಲಿಯ ನಿವಾಸಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News