ಡ್ರಗ್ಸ್ ವಿಚಾರದಲ್ಲಿ ಚಿತ್ರರಂಗವನ್ನು ಮಾಧ್ಯಮಗಳು ಕೆಟ್ಟದಾಗಿ ತೋರಿಸುವುದು ತಪ್ಪು: ಸುಮಲತಾ ಅಂಬರೀಶ್

Update: 2020-09-08 14:45 GMT

ಬೆಂಗಳೂರು, ಸೆ.8: ಚಲನಚಿತ್ರ ರಂಗದಲ್ಲಿ ಡ್ರಗ್ಸ್ ಮಾಫಿಯಾ ಇಲ್ಲವೆಂದು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ, ಇದನ್ನು ಕೇವಲ ಚಲನಚಿತ್ರ ರಂಗಕ್ಕೆ ಸೀಮಿತವಾಗಿ ನೋಡುವುದು ಸರಿಯಲ್ಲ. ಎಲ್ಲ ರಂಗಗಳಲ್ಲೂ ಈ ಪಿಡುಗು ಜೀವಂತವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಡಲ್‍ವುಡ್‍ನಲ್ಲಿ ಈಗ ಈ ಮಾಫಿಯಾ ಜೊತೆ ತಳುಕು ಹಾಕಿ ಎಷ್ಟು ಜನರ ಹೆಸರು ಕೇಳಿ ಬರುತ್ತಿದೆ. ಆದರೆ, ಅದನ್ನು ಇಡೀ ಚಿತ್ರರಂಗಕ್ಕೆ ಅನ್ವಯಿಸುವಂತೆ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸುವುದು ತಪ್ಪು ಎಂದರು.

ಕೇವಲ ಸಿನಿಮಾ ರಂಗ ಮಾತ್ರ ಇದರಲ್ಲಿ ಶಾಮೀಲಾಗಿರುವಂತೆ ತೋರಿಸಿದರೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ದಯವಿಟ್ಟು ಸಿನಿಮಾ ರಂಗವನ್ನು ಗುರಿ ಮಾಡಬೇಡಿ. ನಮ್ಮ ಯುವ ಜನಾಂಗ ಈ ಚಟಕ್ಕೆ ಅಂಟಿಕೊಳ್ಳುತ್ತಿರುವುದು ಕಹಿ ಸತ್ಯ. ಅದನ್ನು ಯಾರೊಬ್ಬರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಕನ್ನಡದ ನಟಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲೇಬೇಕು. ಅಲ್ಲಿಯವರೆಗೆ ಕಾಯೋಣ. ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಕೇವಲ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗಗಳಲ್ಲೂ ಪೀಳಿಗೆ ಬದಲಾಗಿದೆ. ಹಿರಿಯರ ಪೀಳಿಗೆ ಇದ್ದಾಗ ಇದ್ದ ಗೌರವ, ಭಯ ಈಗಿನ ಯುವ ಜನಾಂಗದಲ್ಲಿ ಕಾಣುತ್ತಿಲ್ಲ. ಎಲ್ಲ ಕಡೆ ಒಳ್ಳೆಯದು, ಕೆಟ್ಟದ್ದು ಇದ್ದೆ ಇರುತ್ತದೆ. ಕೆಟ್ಟದನ್ನು ಸರಿಪಡಿಸಲು ನಾವು ಪ್ರಯತ್ನಿಸಬೇಕು ಎಂದು ಸುಮಲತಾ ಹೇಳಿದರು.

ಇಂತಹ ಚಟುವಟಿಕೆಗಳನ್ನು ಯಾರೂ ಹೇಳಿ ಮಾಡಲ್ಲ. ಇದು ಬೇರೆಯದೇ ವಾತಾವರಣದಲ್ಲಿ ನಡೆಯುತ್ತದೆ. ಅದು ಅಭ್ಯಾಸ ಆದವರಿಗೆ ಬಿಡುವುದು ಕಷ್ಟ. ಯಾರ ವಿರುದ್ಧವೇ ಆಗಲಿ ಆರೋಪ ಸಾಬೀತಾಗುವ ಮೊದಲೇ ತೀರ್ಪು ಕೊಡಬಾರದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News