ಸೆ.21ರಿಂದ ವಿಧಾನ ಮಂಡಲ ಅಧಿವೇಶನ: ಸಿಎಂ, ಸಚಿವರು, ಶಾಸಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ಬೆಂಗಳೂರು, ಸೆ. 8: ಇದೇ ತಿಂಗಳ 21ರಿಂದ ಆರಂಭಗೊಳ್ಳಲಿರುವ ಮಳೆಗಾಲದ ಅಧಿವೇಶನ ಕಲಾಪದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ, ವಿಪಕ್ಷ ನಾಯಕರು, ಸಚಿವರು, ಶಾಸಕರು ಹಾಗೂ ಸಚಿವಾಲಯದ ಅಧಿಕಾರಿಗಳ ಸಹಿತ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಕಲಾಪಕ್ಕೆ ಹಾಜರಾಗುವವರು ಅಧಿವೇಶನಕ್ಕೆ 72 ಗಂಟೆ ಮೊದಲು ಕೋವಿಡ್-19 ಪರೀಕ್ಷೆಗೆ ಒಳಪಡಬೇಕು. ಕೊರೋನ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಾಪದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಸೇರಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಅಧಿಕಾರಿಗಳು ದೃಢೀಕರಿಸಿದ ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು ಎಂದರು.
ಆರೋಗ್ಯ ಮತ್ತು ಕಲ್ಯಾಣ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೂರು ದಿನ ಮುಂಚಿತವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು. ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೂ ಪರೀಕ್ಷೆಗೊಳಪಡಬೇಕು. ಇದು ಕಡ್ಡಾಯವಾಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದ ಅವರು, ಪ್ರತಿಯೊಬ್ಬರು ಆಟಿ-ಸಿಟಿಆರ್ ಪರೀಕ್ಷೆಗೊಳಪಡಬೇಕು ಎಂದರು.
ಎಪ್ಪತ್ತು ವರ್ಷದ ದಾಟಿದ ಹಿರಿಯರು ಸದಸ್ಯರು ಕಲಾಪದಲ್ಲಿ ಪಾಲ್ಗೊಳ್ಳಬಹುದು. ಅವರಿಗೆ ಸೂಕ್ತ ಮುನ್ನಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ವ್ಯಕ್ತಿಗತ ಅಂತರ ಕಾಯ್ದುಕೊಂಡು ವಿಧಾನ ಮಂಡಲದ ಸಭಾಂಗಣದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಥರ್ಮಲ್ ಪರೀಕ್ಷೆ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸ್ಪೀಕರ್ ನಿರ್ದೇಶನ ನೀಡಿದರು.
ಕೋವಿಡ್ ವಿಶೇಷ ಸಂದರ್ಭ ಇದಾಗಿದ್ದು, ಅಧಿವೇಶನವನ್ನು ಸುಸೂತ್ರವಾಗಿ ನಡೆಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕಲಾಪವು ಸುಗಮವಾಗಿ ನಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲೇ ಅಧಿವೇಶನ ಕಲಾಪದಕ್ಕ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರಿಗೆ ನಿರ್ಬಂಧ: ಕೋವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕೊರೋನ ಮಾರ್ಗಸೂಚಿಯನ್ನು ಎಲ್ಲ ಕಡ್ಡಾಯವಾಗಿ ಪಾಲಿಸಬೇಕು. ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಎಂಟು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
31 ವಿಧೇಯಕಗಳು: 19 ಸುಗ್ರೀವಾಜ್ಞೆಗಳು ಸೇರಿದಂತೆ ಒಟ್ಟು 31 ವಿಧೇಯಕಗಳನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕಿದೆ. ಜೊತೆಗೆ ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆ ಸೇರಿದಂತೆ ಉಳಿದಂತೆ ಎಲ್ಲ ಕಾರ್ಯಕಲಾಪಗಳು ನಡೆಯಲಿದ್ದು, ಸುಗಮ ಕಲಾಪಕ್ಕೆ ಆಡಳಿತ ಮತ್ತು ವಿಪಕ್ಷಗಳ ಸಹಕಾರ ನೀಡುವ ವಿಶ್ವಾಸವಿದೆ. ಸೆ.21ರ ಬೆಳಗ್ಗೆ 11ಗಂಟೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿಯೊಂದಿಗೆ ಕಲಾಪ ಆರಂಭಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿರುವ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ)ಆದ್ಯಾದೇಶ, ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರೆ ಕಾನೂನುಗಳು(ತಿದ್ದುಪಡಿ), ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ) ವಿದೇಯಕ ಸೇರಿದಂತೆ ಅತ್ಯಂತದ ಮಹತ್ವದ ವಿಧೇಯಕಗಳ ಈ ಅಧಿವೇಶನದಲ್ಲಿ ಮಂಡನೆ ಮತ್ತು ಅಂಗೀಕಾರಕ್ಕೆ ಬಾಕಿ ಇವೆ.
ನಿಯೋಗಗಳ ಭೇಟಿಗೆ ನಿರ್ಬಂಧ: ಮುಖ್ಯಮಂತ್ರಿ ಮತ್ತು ಸಚಿವರುಗಳು ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆ ಕಲಾಪದ ಮೊಗಸಾಲೆ ಸೇರಿದಂತೆ ಮೊದಲ ಮಹಡಿಯಲ್ಲಿ ಜನದಟ್ಟಣೆ ಉಂಟಾಗುವ ಯಾವುದೇ ನಿಯೋಗ ಮತ್ತು ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದ್ದು, ಸಾಧ್ಯವಾದಷ್ಟು ತಮ್ಮ ನಿವಾಸಗಳ ಬಳಿ ಅಥವಾ ಹೊರಗೆ ನಿಯೋಗಗಳನ್ನು ಭೇಟಿ ಮಾಡಬೇಕು ಎಂದು ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ತಿಳಿಸಿದರು.