ನೆರೆ ಹಾನಿ: ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಅಧ್ಯಯನ ತಂಡದಿಂದ ಪರಿಶೀಲನೆ

Update: 2020-09-08 14:51 GMT

ಬೆಳಗಾವಿ, ಸೆ.8: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು. ಹೈದರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ., ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಕಲೆಹಾಕಿದರು.

ನಗರಕ್ಕೆ ಆಗಮಿಸಿದ ಇಬ್ಬರು ಸದಸ್ಯರ ತಂಡವನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು. ಮೊದಲಿಗೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಅತಿವೃಷ್ಟಿಯಿಂದ ಸೋಯಾಬಿನ್ ಬೆಳೆ ಹಾನಿಯನ್ನು ಪರಿಶೀಲಿಸಿತು.

1.17 ಎಕರೆಯಲ್ಲಿ ಬೆಳೆದ ಸೋಯಾಬಿನ್ ಬೆಳೆ ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ. ಎಕರೆಗೆ 15 ಸಾವಿರ ರೂ.ಖರ್ಚು ಮಾಡಿದ್ದು, 15 ಕ್ವಿಂಟಾಲ್ ಬೆಲೆಯ ನಿರೀಕ್ಷೆಯಿತ್ತು. ಮಳೆಯಿಂದ ಇದೀಗ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡರು. ಬಡಕುಂದ್ರಿ ಗ್ರಾಮದಲ್ಲಿ 30 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು.

ಸೋಯಾಬಿನ್ ಬೆಳೆಯಲು ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೇ ಎಂದು ತಂಡದ ಮುಖ್ಯಸ್ಥ ಮನೋಹರನ್ ರೈತನನ್ನು ಪ್ರಶ್ನಿಸಿದರು. ಇದಲ್ಲದೇ ಬೇರೆ ಬೆಳೆ ನಾಶವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿವರ್ಷವೂ ಇದೇ ರೀತಿ ಬೆಳೆಹಾನಿಯಾಗುತ್ತಿದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ತಿಳಿಸಿದರು. ಹಿರಣ್ಯಕೇಶಿ ನದಿ ದಂಡೆಯಲ್ಲಿರುವ ಚೌಗಲಾ ಎಂಬುವವರ ಜಮೀನನಲ್ಲಿ ಸೋಯಾಬಿನ್ ಹಾಗೂ ಪಕ್ಕದಲ್ಲಿದ್ದ ಕಬ್ಬು ಬೆಳೆಹಾನಿ ಬಗ್ಗೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ರೈತರು, ಪ್ರತಿವರ್ಷ ಬೆಳೆಹಾನಿ ತಪ್ಪಿಸಲು ನದಿ ದಂಡೆಯ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ, ಪ್ರತಿವರ್ಷ ಎದುರಾಗುತ್ತಿರುವ ಸಮಸ್ಯೆಯನ್ನು ವಿವರಿಸಿದರು. ಬಳಿಕ ಹೊಸೂರಿನಲ್ಲಿ ಗಜ್ಜರಿ ಬೆಳೆಹಾನಿ ಪರಿಶೀಲಿಸಿದರು. ಎಕರೆಗೆ ಮೂರು ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಬೆಳೆಹಾನಿಯಿಂದ ದಿಕ್ಕು ತೋಚದಂತಾಗಿದೆ ಎಂದು ರೈತರು ಕೇಂದ್ರ ತಂಡಕ್ಕೆ ತಿಳಿಸಿದರು. ನಂತರ ಪಕ್ಕದ ಇಂಗಳಿ ಗ್ರಾಮದ ಕಲ್ಲಪ್ಪ ಅವರ ಜಮೀನಿನಲ್ಲಿ ಹಿನ್ನೀರಿನಿಂದ ಹಾನಿಗೊಳಗಾದ ಮೆಕ್ಕೆಜೋಳದ ಬೆಳೆಯನ್ನು  ಅಧ್ಯಯನ ತಂಡವು ಪರಿಶೀಲಿಸಿತು.

ಪರಿಹಾರ ಬಿಡುಗಡೆಗೆ ಒತ್ತಾಯ: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಗೋಕಾಕ ತಾಲೂಕಿನ ಲೋಳಸೂರ ಸೇತುವೆಯನ್ನು ಕೇಂದ್ರ ಅಧ್ಯಯನ ತಂಡ ಪರಿಶೀಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಜನರು, ಕಳೆದ ಬಾರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಜನರಿಗೆ ತಕ್ಷಣವೇ ಪರಿಹಾರ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಅಲ್ಲದೆ, ಪರಿಹಾರ ಮೊತ್ತ ಮತ್ತು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ರಸ್ತೆ ಸೇರಿದಂತೆ ಬಹುತೇಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ಪರಿಶೀಲನೆ ಬಳಿಕ ತೆರಳುತ್ತಿದ್ದ ಕೇಂದ್ರ ಅಧ್ಯಯನ ತಂಡದ ವಾಹನವನ್ನು ಅಡ್ಡಗಟ್ಟಿದ ಕೆಲವರು, ಪರಿಹಾರ ಬಿಡುಗಡೆಗೆ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮೂಲಕ ಸ್ಥಳೀಯ ಜನರ ಮನವೊಲಿಸಿದರು. ಇದಾದ ಬಳಿಕ ಕೇಂದ್ರ ಅಧ್ಯಯನ ತಂಡವು ಸವದತ್ತಿ ಮಾರ್ಗವಾಗಿ ಧಾರವಾಡ ಜಿಲ್ಲೆಗೆ ತೆರಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News