ಎಸ್.ಮೂರ್ತಿ ನೇಮಕ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ
ಬೆಂಗಳೂರು, ಸೆ.8: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿ ಅವರನ್ನು ಅಮಾನತುಗೊಳಿಸಿದ ಆದೇಶ ನಿಯಮ ಬಾಹಿರವಾಗಿರುವ ಕಾರಣ ಪ್ರಕರಣದಲ್ಲಿನ ಶಿಸ್ತುಕ್ರಮ ವಿಚಾರಣಾ ಸಮಿತಿಯ ಫಲಿತಾಂಶದ ಆಧಾರದ ಮೇಲೆ ಮೂರು ವಾರದೊಳಗೆ ಮೂರ್ತಿ ಅವರನ್ನು ಮರು ನೇಮಕ ಮಾಡಬೇಕು ಎಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಈ ಕುರಿತು ವಿಧಾನಸಭೆ ವಿಶೇಷ ಮಂಡಳಿ, ವಿಧಾನಸಭೆ ಸ್ಪೀಕರ್ ಹಾಗೂ ವಿಧಾನಸಭೆ ಕಾರ್ಯದರ್ಶಿ ಅವರು ಸಲ್ಲಿಸಿರುವ ಮೇಲ್ಮನವಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಪ್ರತಿವಾದಿ ಎಸ್.ಮೂರ್ತಿ ಪರ ಹಿರಿಯ ನ್ಯಾಯವಾದಿ ಎ.ಎಸ್.ಪೊನ್ನಣ್ಣ ಅವರು ವಾದಿಸಿದರು. ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಏಕ ಸದಸ್ಯ ನ್ಯಾಯಪೀಠದಲ್ಲಿನ ವಿಚಾರಣೆಯ ಅಂತಿಮ ಫಲಿತಾಂಶದ ಬಳಿಕ ಈ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು. ಸದ್ಯ ಈ ಮೇಲ್ಮನವಿಯನ್ನು ಬಾಕಿ ಇರಿಸಲಾಗುವುದು ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿತು.