×
Ad

ಮಾನಹಾನಿ ಸುದ್ದಿ ಪ್ರಕಟ ಆರೋಪ: ವಾರ ಪತ್ರಿಕೆಯ ಸಂಪಾದಕ, ವರದಿಗಾರನಿಗೆ ಶಿಕ್ಷೆ ವಿಧಿಸಿದ ಹೈಕೋರ್ಟ್

Update: 2020-09-10 17:46 IST

ಬೆಂಗಳೂರು, ಸೆ.10: ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಮತ್ತೊಬ್ಬರ ಬದುಕಿನ ಹಕ್ಕನ್ನು ಆಕ್ರಮಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಾನಹಾನಿ ಪ್ರಕರಣದಲ್ಲಿ ವಾರ ಪತ್ರಿಕೆಯೊಂದರ ಸಂಪಾದಕ ಮತ್ತು ವರದಿಗಾರನಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

ಮಾನಹಾನಿ ಮಾಡುವುದು ಸಂವಿಧಾನ ನೀಡಿರುವ ಬದುಕುವ ಹಕ್ಕನ್ನು ಉಲ್ಲಂಘಿಸಿದಂತೆ. ಸಂವಿಧಾನದ ವಿಧಿ 21ರ ಅನ್ವಯ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನೀಡಿದೆ. ಈ ಬದುಕುವ ಹಕ್ಕಿನಲ್ಲಿ ವ್ಯಕ್ತಿಯ ಘನತೆ ಮತ್ತು ಖ್ಯಾತಿಯೂ ಒಳಗೊಂಡಿರುತ್ತದೆ. ಇದನ್ನು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತೊಬ್ಬರು ಆಕ್ರಮಿಸಿಕೊಳ್ಳುವುದು ಸಮಂಜಸವಲ್ಲ ಮತ್ತು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣವೇನು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರಸಾರವಾಗುವ ಕಡಲ ಕೂಗು ವಾರಪತ್ರಿಕೆ 2005ರ ಆ.8ರಂದು ಸ್ಥಳೀಯ ಶಾಲಾ ಶಿಕ್ಷಕಿ ಸಿಲ್ವಿನಾ ಅವರ ಮಾನಹಾನಿ ಮಾಡುವಂತಹ ವರದಿ ಪ್ರಕಟಿಸಿತ್ತು. ಈ ವಿಚಾರವಾಗಿ ಶಿಕ್ಷಕಿ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ತಮ್ಮ ಮಾನಹಾನಿ ಮಾಡಿರುವ ಪತ್ರಿಕೆಯ ಸಂಪಾದಕ ಗಣೇಶ್ ಪಿ. ಹಾಗೂ ವರದಿಗಾರ ರಾಘವೇಂದ್ರ ಆರ್. ಭಟ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿ, ಅರ್ಜಿ ಸಲ್ಲಿಸಿದ್ದರು.

ವಕೀಲರ ವಾದ ಆಲಿಸಿ ತೀರ್ಪು ಪ್ರಕಟಿಸಿದ್ದ ಭಟ್ಕಳ ಜೆಎಂಎಫ್‍ಸಿ ಕೋರ್ಟ್ 2011ರ ಜ. 5ರಂದು ಆರೋಪಿತರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಸಿಲ್ವಿನಾ ಹೈಕೋರ್ಟ್‍ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಆರೋಪಿಗಳನ್ನು ಖುಲಾಸೆ ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದಿದ್ದು, ಆರೋಪಿತರಿಗೆ ಶಿಕ್ಷೆ ವಿಧಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಟೀಕಿಸಿರುವ ಪೀಠ, ಪ್ರಕರಣದಲ್ಲಿನ ಅಂಶಗಳು ಹಾಗೂ ಸಂದರ್ಭಗಳನ್ನು ಗಮನಿಸಿದರೆ ಆರೋಪಿತರು ಸಮಾಜದ ಹಿತಕ್ಕಾಗಿ ಅಥವಾ ಸದುದ್ದೇಶದಿಂದ ವರದಿ ಪ್ರಕಟಿಸಿದ್ದಾರೆ ಎಂಬಂತೆ ಕಾಣುವುದಿಲ್ಲ. ಹಾಗೆಯೇ ವರದಿ ಪ್ರಕಟಿಸಿರುವ ವಿಚಾರದಲ್ಲಿ ಅವರು ಮುಗ್ಧರೆಂದೂ ಪರಿಗಣಿಸಲು ಸಾಧ್ಯವಿಲ್ಲ. ಹಾಗಿದ್ದೂ ವಿಚಾರಣಾ ನ್ಯಾಯಾಲಯ ಸೂಕ್ತ ಕಾರಣಗಳಿಲ್ಲದೆ ಆರೋಪಿತರನ್ನು ಖುಲಾಸೆಗೊಳಿಸಿರುವ ತೀರ್ಪು ಅಸಹಜ ಮತ್ತು ದೋಷಪೂರಿತ ಎಂದಿದೆ.

ಶಿಕ್ಷೆ ಪ್ರಕಟ: ಹೈಕೋರ್ಟ್ ಆರೋಪಿತ ಸಂಪಾದಕ ಹಾಗೂ ವರದಿಗಾರನಿಗೆ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ತಲಾ 30 ಸಾವಿರ ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು. ಒಂದು ವೇಳೆ ದಂಡ ಕಟ್ಟಲು ವಿಫಲರಾದರೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ಪ್ರಕಟಿಸಿದೆ.

ಅಲ್ಲದೇ, ದಂಡದ ಮೊತ್ತದಲ್ಲಿ ದೂರುದಾರರಿಗೆ ಪರಿಹಾರವಾಗಿ ಒಟ್ಟು 50 ಸಾವಿರ ರೂಪಾಯಿ ನೀಡಬೇಕು. ಮಹಿಳೆಯನ್ನು ಕೀಳಾಗಿ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಚಿತ್ರಿಸಿ ಅವರ ತೇಜೋವಧೆ ಮಾಡಿರುವುದರಿಂದ ಅವರಿಗೆ ಈ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಒಟ್ಟಾರೆ ಶಿಕ್ಷಕಿಯೊಬ್ಬರು ತಮ್ಮ ಮಾನಹಾನಿ ಮಾಡಿದವರ ವಿರುದ್ಧ ಸುದೀರ್ಘ 15 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ, ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News