ಭೂ ಸ್ವಾಧೀನ ಪ್ರಕ್ರಿಯೆಗೆ ಸಹಕರಿಸಿದರೆ 2021ರ ಮೇ ಒಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ರಮೇಶ್ ಜಾರಕಿಹೊಳಿ

Update: 2020-09-10 12:17 GMT

ಬೆಂಗಳೂರು, ಸೆ. 10: ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಮೊದಲ ಹಂತದ ಕಾಮಗಾರಿಗಳು 2021ರ ಮೇ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ರೈತರು ಮತ್ತು ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕರಿಸಿದರೆ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎತ್ತಿನಹೊಳೆ ಯೋಜನೆ ಭೂ ಸ್ವಾಧೀನ ಕುರಿತು ಹಾಸನ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆ ಯೋನೆ ಅನುಷ್ಠಾನ ವಿಳಂಬಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ತೊಡಕಾಗಿದ್ದು ಅದನ್ನು ಪರಿಹರಿಸಲು ಕ್ರಮ ವಹಿಸಲಾಗಿದ್ದು, ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಉದ್ದೇಶಿತ ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಬಯಲುಸೀಮೆಯ ಶಾಶ್ವತ ಬರದ ಛಾಯೆಯಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಇದರಿಂದ ಕೆರೆ ತುಂಬಿಸುವುದಲ್ಲದೆ, ಅಂತರ್ಜಲ ವೃದ್ಧಿಗೆ ನೆರವಾಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಅನಿಲ್ ಕುಮಾರ್, ವಿ.ಜೆ.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ, ರೈತ ಮುಖಂಡ ಸುರೇಂದ್ರ, ಕಾಫಿ ಬೆಳೆಗಾರರ ಸಂಘದ ಕೃಷ್ಣಪ್ಪ ಸೇರಿದಂತೆ ಹಾಸನ ಮತ್ತು ಸಕಲೇಶಪುರದ ರೈತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News