×
Ad

ಪಾತಾಳಕ್ಕೆ ಕುಸಿದ ಶುಂಠಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ರೈತರು

Update: 2020-09-10 17:59 IST

ಮಡಿಕೇರಿ, ಸೆ.10: ಶುಂಠಿಯ ಬೆಲೆ ಈ ಬಾರಿ ಪಾತಾಳಕ್ಕೆ ಇಳಿದಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಶುಂಠಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದೆಂಬ ಆಶಯದೊಂದಿಗೆ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಶುಂಠಿ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ಶುಂಠಿ ಬೆಲೆ ಹಿಂದೆಂದಿಗಿಂತಲೂ ಕಡಿಮೆಯಾಗಿರುವುದರಿಂದ ಜಿಲ್ಲೆಯಲ್ಲಿ ಶುಂಠಿ ಬೆಳೆದ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಬಾರಿ ಕೊರೋನ ಸಂಕಷ್ಟದ ನಡುವೆಯೂ ಅನೇಕ ರೈತರು ಶುಂಠಿ ಬೆಳೆದಿದ್ದಾರೆ. ಆದರೆ ಇದೀಗ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ಅಂತರ್ ರಾಜ್ಯಗಳಲ್ಲೂ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶುಂಠಿಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಈ ಹಿಂದೆ ಶುಂಠಿ ಬೆಳೆ ಕಟಾವಿಗೆ ಬರುವುದಕ್ಕೆ ಮುಂಚೆಯೇ ಕೇರಳ ಸೇರಿದಂತೆ ವಿವಿಧೆಡೆಯ ವ್ಯಾಪಾರಿಗಳು ಶುಂಠಿ ಖರೀದಿಗೆ ಮುಂದಾಗುತ್ತಿದ್ದರು. ಆದರೆ ಈ ವರ್ಷ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಂಠಿ ಬೆಳೆಯನ್ನು ಕಿತ್ತು ಸಾಗಾಟ ಮಾಡಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ನೊಂದ ರೈತರು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಶುಂಠಿ ಬೆಳೆಗೆ ಏಳು ತಿಂಗಳುಗಳು ಕಳೆಯುತ್ತಿದ್ದು, ಅದನ್ನು ಕಿತ್ತು ಮಾರಾಟ ಮಾಡುವ ಸಮಯ ಬಂದಿದೆ. ಆದರೆ ಕಳೆದ 10 ವರ್ಷಗಳಿಂದಲೂ 60 ಕೆಜಿಯ ಶುಂಠಿ ಮೂಟೆಗೆ 1500ರಷ್ಟಿದ್ದ ಬೆಲೆ ಈ ಬಾರಿ 750ಕ್ಕೆ ಇಳಿದಿದೆ. ಈ ದರಕ್ಕೆ ಶುಂಠಿ ಬೆಳೆಯನ್ನು ಕಿತ್ತು ಕೊಡಲು ರೈತರು ಮುಂದಾಗುತ್ತಿದ್ದರೂ, ಖರೀದಿದಾರರು ಮುಂದೆ ಬರದೆ ಬೆಳೆ ಹಾಳಾಗುತ್ತಿದೆ. ಮತ್ತೊಂದೆಡೆ ಆಗಾಗ ಸುರಿಯುತ್ತಿರುವ ಭಾರೀ ಮಳೆ ಶುಂಠಿಗೆ ರೋಗವನ್ನು ಹರಡುತ್ತಿದೆ. ಕಳೆದ ವರ್ಷಗಳಲ್ಲಿ ಇದೇ ಸಮಯದಲ್ಲಿ ಒಂದು ಮೂಟೆ ಶುಂಠಿ ಚೀಲಕ್ಕೆ ಕಡಿಮೆಯೆಂದರೂ 2600-3000 ರೂ. ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಶುಂಠಿ ಬೆಳೆಯನ್ನು ಕೆಳುವವರೇ ಇಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

ಜಿಲ್ಲೆಯ ರೈತರು ಭೂಮಿ, ನೀರು, ಶುಂಠಿ ಬೀಜಕ್ಕೆ ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಅದರಲ್ಲೂ ಉತ್ತಮ ಶುಂಠಿ ಬೀಜವನ್ನು ಹೊರ ಜಿಲ್ಲೆಗಳಿಂದ ತಂದು ನಾಟಿ ಮಾಡಿದ್ದಾರೆ. ಸಹಕಾರ ಸಂಘಗಳಲ್ಲಿ ಮತ್ತು ಇತರೆ ಸಂಸ್ಧೆಗಳಲ್ಲಿ ಸಾಲ ಪಡೆದು ಶುಂಠಿ ಬೆಳೆದವರೂ ಇದ್ದಾರೆ. ಆದರೆ ಈ ಸಾಲವನ್ನು ಮರುಪಾವತಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. 

ಕಳೆದ ಅರು ತಿಂಗಳ ಹಿಂದೆ ಬೀಜದ ಶುಂಠಿಗೆ 5,000 ರೂ. ಬೆಲೆ ಇತ್ತು. ಆದರೆ ಈಗ ಬೀಜದ ಶುಂಠಿಗೂ ಕೇವಲ 1100ರೂ. ದೊರಕುತ್ತಿದೆ. ಇದರಿಂದಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ, ತೂರೆನೂರು, ಶಿರಂಗಾಲ ಸಿದ್ದಲಿಂಗಪುರ, ಬಾಣವಾರ,  ಗುಡ್ಡೆಹೂಸೂರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮಳೆಯಿಂದಾಗಿ ಶುಂಠಿ ಗದ್ದೆಗಳಲ್ಲೇ ಕೊಳೆತು ಹೋಗುತ್ತಿದೆ. ಈ ಬಾರಿ ಶುಂಠಿಯ ಬೀಜದ ಬೆಲೆಯೂ ರೈತರಿಗೆ ದೊರಕುತ್ತಿಲ್ಲ. ಮತ್ತೊಂದೆಡೆ ನೀರು, ಗೊಬ್ಬರ ಹಾಗೂ ಕಾರ್ಮಿಕರಿಗಾಗಿ ಮಾಡಿದ ಖರ್ಚು ಕೂಡ ಅಧಿಕವಿದ್ದು, ಶುಂಠಿ ಬೆಳೆದ ರೈತರು ಇದೀಗ ತಲೆಮೇಲೆ ಕೈ ಇಟ್ಟು ಕೂರುವ ಪ್ರಸಂಗ ಎದುರಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News