ಮನವಿ ಸ್ವೀಕರಿಸಲು ಕಾರು ನಿಲ್ಲಿಸದ ಸಂಸದೆ ಶೋಭಾ: ಕಪ್ಪು ಬಾವುಟ ಪ್ರದರ್ಶಿಸಿ ಜೆಡಿಎಸ್ ಧರಣಿ

Update: 2020-09-10 14:16 GMT

ಕಳಸ, ಸೆ.10: ಕಳಸ ತಾಲೂಕು ಕೇಂದ್ರ ಘೋಷಣೆಯಾಗಿ ವರ್ಷ ಕಳೆದಿದ್ದು, ಶೀಘ್ರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸಂಸದೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಲು ಮುಂದಾಗಿದ್ದ ವೇಳೆ ಮನವಿ ಸ್ವೀಕರಿಸದೇ ಸಂಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗುರುವಾರ ಧರಣಿ ನಡೆಸಿದ್ದು, ಧರಣಿ ನಿರತ ನೂರಾರು ಕಾರ್ಯಕರ್ತರು, ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಕಳಸ ಹೋಬಳಿ ಕೇಂದ್ರವನ್ನು ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದ್ದು, ವರ್ಷ ಕಳೆದರೂ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ತಾಲೂಕು ಕೇಂದ್ರವನ್ನೂ ಇನ್ನೂ ಅನುಷ್ಠಾನಗೊಳಿಸಿಲ್ಲ. ಕೂಡಲೇ ಕಳಸ ತಾಲೂಕು ಕೇಂದ್ರದ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ನೇತೃತ್ವದಲ್ಲಿ ಪಟ್ಟಣದಲ್ಲಿ ಧರಣಿ ನಡೆಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಂಸದೆ ಶೋಭಾ ಕರಂದ್ಲಾಜೆ ಅವರಿಗಾಗಿ ಪಟ್ಟಣದ ವೆಂಕಟರಮಣ ದೇವಾಲಯದ ಬಳಿ ಕಾಯುತ್ತಿದ್ದರು. 

ಕಳಸ ಹೋಬಳಿಯ ವಿವಿಧೆಡೆ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಲು ಗುರುವಾರ ಸಂಸದೆ ಶೋಭ ಕರಂದ್ಲಾಜೆ, ಶಾಸಕ ಎಂ.ಪಿ.ಕುಮಾರಸ್ವಾಮಿ ಆಗಮಿಸಿದ್ದರು. ಹೊರನಾಡು ದೇಗುಲದಲ್ಲಿ ಪೂಜೆ ಮುಗಿಸಿ ಕಳಸಕ್ಕೆ ಬರುವ ವೆಂಕಟರಮಣ ದೇವಸ್ಥಾನದ ಸಮೀಪ ಜೆಡಿಎಸ್ ಕಾರ್ಯಕರ್ತರು ಸಂಸದರಿಗೆ ಕಳಸ ತಾಲೂಕು ಕೇಂದ್ರವನ್ನು ಕೂಡಲೇ ಕಾರ್ಯರಂಭ ಮಾಡಿಕೊಡಿ ಮತ್ತು ಅತಿವೃಷ್ಟಿ ಹಾನಿಗೊಳಗಾದವರಿಗೆ ಕೂಡಲೇ ಪರಿಹಾರವನ್ನು ಕೊಡಬೇಕು ಎನ್ನುವ ಮನವಿಯನ್ನು ಸಲ್ಲಿಸಲು ಮುಂದಾಗಿದ್ದರು. 

ಆದರೆ ಅದೇ ಮಾರ್ಗವಾಗಿ ಬಂದ ಸಂಸದೇ ಶೋಭಾ ಕರಂದ್ಲಾಜೆ ತಮ್ಮ ಕಾರು ನಿಲ್ಲಿಸಿದೇ ತೆರಳಿದರು. ಇದರಿಂದ ಆಕ್ರೋಶಿತರಾದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಂಸದೆ ಕರಂದ್ಲಾಜೆ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಅಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ ಸಂಸದರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಾಜಿ ಸಚಿವ ಬಿ.ಬಿ.ನಿಂಗಯ್ಯ, ದೇವರಾಜ್ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸ್ ವಾಹನದಲ್ಲಿ ತುಂಬಿ ಬಂಧನಕ್ಕೊಳಪಡಿಸಿದರು. 

ಬಂಧನಕ್ಕೊಳಗಾದ ಜೆಡಿಎಸ್ ಕಾರ್ಯಕರ್ತರನ್ನು ಬಸ್ಸಿನಲ್ಲಿ ಠಾಣೆಯ ಸಮೀಪ ಕರೆದುಕೊಂಡು ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಮತ್ತೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ ತಲ್ಲಾಟಗಳು ನಡೆದವು. ಕಾರ್ಯಕರ್ತರ ಕೈಯಲ್ಲಿದ್ದ ಕಪ್ಪು ಬಾವುಟಗಳನ್ನು ಪೊಲೀಸರು ವಶಪಡಿಸಿಕೊಂಡರು. ಬಳಿಕ ಪೊಲೀಸ್ ಠಾಣಾ ಆವರಣದಲ್ಲಿಯೇ ಕೆಲ ಕಾಲ ಪ್ರತಿಭಟನೆ ನಡೆಸಿದ ಮುಖಂಡರು, ಸಂಸದರ ನಡೆಯನ್ನು ತೀವ್ರವಾಗಿ ಖಂಡಿಸಿದರು. 

ಸಂಸದೆ ಶೋಭ ಕರಂದ್ಲಾಜೆ ಹೋಬಳಿಯ ನೂಜಿ ಗ್ರಾಮದಲ್ಲಿ ರಸ್ತೆ ಕಾಮಗರಿಯ ಗುದ್ದಲಿ ಪೂಜೆ ನೆರವೇರಿಸಿ ಹಿಂದಿರುಗಿದ ಬಳಿಕ, ಬಂಧನಕ್ಕೊಳಗಾದ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಳಸ ತಾಲೂಕು ಕೇಂದ್ರವನ್ನು ಮಾಡಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಆದರೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಕೂಡ ತಾಲೂಕು ಕೇಂದ್ರವನ್ನು ಕಾರ್ಯರಂಭ ಮಾಡಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಮನವಿಯನ್ನು ಕೂಡ ಪಡೆದುಕೊಳ್ಳಲು ಸಂಸದೆ ಶೋಭಾ ಉದ್ಧಟತನ ತೋರಿಸಿದ್ದಾರೆ. ಇದು ಖಂಡನೀಯ ಎಂದರು.

ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ನಾವು ಯಾವುದೇ ಬಂಧನಕ್ಕೂ ಹೆದರಲ್ಲ, ಇನ್ನು ಎಲ್ಲದಕ್ಕೂ ತಯಾರಾಗಿದ್ದೇವೆ. ಮುಂದಿನ ದಿನದಲ್ಲಿ ಕಳಸ ತಾಲೂಕು ಕೇಂದ್ರದ ಕಾರ್ಯರಂಬಕ್ಕೆ ಒತ್ತಾಯಿಸಿ ಕಳಸ ಪಟ್ಟಣ ಬಂದ್ ಮಾಡುತ್ತೇವೆ. ಅಧಿಕಾರದಲ್ಲಿರುವ ಸಂಸದರ ಈ ನಡೆ ಸರಿಯಲ್ಲ, ವಿರೋಧ ಪಕ್ಷಗಳ ಮನವಿ ಆಲಿಸುವುದು ಜನಪ್ರತನಿಧಿಗಳ ಕರ್ತವ್ಯವಾಗಿದೆ. ಆದರೆ ಶೋಭಾ ನಡೆ ಸರ್ವಾಧಿಕಾರದ ಪರಮಾವಧಿ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಚ್.ಎಚ್.ದೇವರಾಜ್, ಹೋಬಳಿ ಅಧ್ಯಕ್ಷ ರತ್ನಾಕರ್, ಕಾರ್ಯದರ್ಶಿ ಬ್ರಹ್ಮದೇವ, ಮುಖಂಡರಾದ ರವಿ ರೈ, ಅನಿಲ್ ಡಿಸೋಜಾ, ಮುಹಮ್ಮದ್ ರಫೀಕ್, ಜ್ವಾಲನಯ್ಯ, ಸಂತೋಷ್ ಹಿನಾರಿ, ಕೆ.ಜೆ.ಧರಣೇಂದ್ರ, ಪ್ರಸಾದ್, ಪ್ರಕಾಶ್ ಕುಮಾರ್, ಸುರೇಶ್, ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News