ಜಿಲ್ಲಾಧಿಕಾರಿ, ಜಿ.ಪಂ. ಸಿಇಒಗಳೊಂದಿಗೆ ಸಿಎಂ ವಿಡಿಯೋ ಸಂವಾದ: ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಳಕ್ಕೆ ಸೂಚನೆ

Update: 2020-09-10 14:18 GMT

ಬೆಂಗಳೂರು, ಸೆ.10: ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕ್ರಮ ವಹಿಸಿಬೇಕು. ಪರೀಕ್ಷೆಗೆ ಅಗತ್ಯವಿರುವ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ 19 ನಿಯಂತ್ರಣ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಅವರು ವಿಡಿಯೋ ಸಂವಾದ ನಡೆಸಿದರು.

ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯಗಳು ಕಡಿಮೆ ಇದ್ದಲ್ಲಿ ಪಕ್ಕದ ಜಿಲ್ಲೆಯಲ್ಲಿ ಮಾಡಿಸಲು ಕ್ರಮ ವಹಿಸಬೇಕು. ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಬೇಕು. ಆಕ್ಸಿಜನ್ ಸಿಲಿಂಡರ್‍ಗಳ ಸಮಸ್ಯೆ ಇದ್ದರೆ ಹೆಚ್ಚು ಆಕ್ಸಿಜನ್ ಸಿಲಿಂಡರ್ ಲಭ್ಯವಿರುವ ಜಿಲ್ಲೆಗಳಿಂದ ಪಡೆದುಕೊಳ್ಳುವಂತೆ ಅವರು ಹೇಳಿದರು.

ಮನೆ ಮನೆ ಸರ್ವೇ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚಲು ಕ್ರಮ ವಹಿಸಬೇಕು. ಈಗಾಗಲೇ ಪಿ.ಜಿ.ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೌನ್ಸೆಲಿಂಗ್ ಮುಗಿದಿದ್ದು, ಇನ್ನೆರಡು ದಿನದಲ್ಲಿ 900 ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಜಿಲ್ಲೆಗಳಿಗೆ ನಿಯೋಜಿಸಲಾಗುವುದು. ರಾಜ್ಯದಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವುದು ಆದ್ಯತೆಯಾಗಬೇಕು ಎಂದು ಅವರು ಸೂಚಿಸಿದರು.

ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇರುವುದರಿಂದ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ. ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆದ್ಯತೆ ನೀಡಬೇಕು. ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಐ.ಸಿ.ಯುಗಳಲ್ಲಿ ವೆಂಟಿಲೇಟರ್ ಗಳ ಲಭ್ಯತೆಯ ಬಗ್ಗೆಯೂ ನಿಗಾ ವಹಿಸಬೇಕು. ಗೃಹ ನಿರ್ಬಂಧದಲ್ಲಿರುವವರ(ಹೋಂ ಐಸೋಲೇಷನ್) ಬಗ್ಗೆ ಮೇಲ್ವಿಚಾರಣೆ ಮಾಡುವುದನ್ನು ಪ್ರಮುಖವಾಗಿ ಮಾಡಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಪ್ರವಾಹ: ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟು 8071 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿಗಳು ಹಾನಿಯ ಪ್ರಮಾಣವನ್ನು ಮನವರಿಕೆ ಮಾಡಿಕೊಟ್ಟಿದ್ದು, ಕೇಂದ್ರದಿಂದ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವರದಿಯನ್ನು ಸಲ್ಲಿಸಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಮತ್ತೆ ಮಳೆ ಪ್ರಾರಂಭವಾಗಿದ್ದು, ಇದರಿಂದಾಗಿರುವ ಹಾನಿಯನ್ನು ಅಂದಾಜು ಮಾಡಿ ಒಟ್ಟಾರೆ ಪರಿಹಾರದ ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಕೇಂದ್ರ ಅಧ್ಯಯನ ತಂಡವು ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳ ಪುನರ್ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು. ಕಳೆದ ಸಾಲಿನ ಪ್ರವಾಹದಲ್ಲಿನ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.

ಪರಿಹಾರ ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಗೊಂಡ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಗೊಬ್ಬರದ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಯಡಿಯೂರಪ್ಪ ಹೇಳಿದರು.

ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿ ಶಕ್ತಿ ಮೀರಿ ಪರಿಸ್ಥಿತಿ ನಿಭಾಯಿಸಲು ಶ್ರಮಿಸಿದ್ದಾರೆ. ವೆಂಟಿಲೇಟರ್ ಕೊರತೆ ಇಲ್ಲ ಎನ್ನುವುದು ಸಮಾಧಾನಕರ ವಿಷಯ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ತುರ್ತು ಪರಿಹಾರವನ್ನು ಕೈಗೊಳ್ಳಲು ಹಣದ ಲಭ್ಯತೆ ಇದೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ತುರ್ತಾಗಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿ ಎಂದು ಅವರು ಸೂಚಿಸಿದರು.

ರೈತರಿಗೆ ಬೆಳೆ ಹಾನಿಗೆ  ಪರಿಹಾರ ನೀಡಲು ಆದ್ಯತೆ ಮೇರೆಗೆ ಕೆಲಸ ಮಾಡಬೇಕು. ವಿಶೇಷವಾದ ಸಂದರ್ಭವಾದ್ದರಿಂದ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ತಿಳಿಸಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News